janadhvani

Kannada Online News Paper

ದೇಶದ ಮುಸ್ಲಿಮರನ್ನು ಭಯೋತ್ಪಾಧಕರೆಂದು ಬಣ್ಣಿಸದಿರಿ-ಶ್ರೀಲಂಕಾ ಅಧ್ಯಕ್ಷ

ಕೊಲಂಬೋ : ಈಸ್ಟರ್ ದಿನದಂದು ಭಯೋತ್ಪಾಧಕರು ನಡೆಸಿದ ಬಾಂಬ್ ಸ್ಪೋಟದ ಹಿನ್ನಲೆಯಲ್ಲಿ ದೇಶದ ಅಲ್ಪಸಂಖ್ಯಾತ ಮುಸ್ಲಿಮರನ್ನು ಭಯೋತ್ಪಾಧಕರೆಂದು ಬಣ್ಣಿಸಬಾರದು ಎಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದ್ದಾರೆ.

ಐಸಿಸ್ ಉಗ್ರವಾದಿಗಳನ್ನು ಸಂಪೂರ್ಣ ನಿರ್ಣಾಮ ಮಾಡುವ ಸಾಮರ್ಥ್ಯ ಶ್ರೀಲಂಕಾ ಸೇನೆಗಿದೆ ಎಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ತಿಳಿಸಿದರು.

256 ಮಂದಿಯ ಸಾವಿಗೆ ಕಾರಣವಾದ ಸರಣಿ ಸ್ಪೋಟದ ಹೋಣೆಗಾರಿಕೆಯನ್ನು ಐಸಿಸ್ ವಹಿಸಿಕೊಂಡಿದೆ. ಅಕ್ರಮವನ್ನು ತಡೆಗಟ್ಟುವಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ, ಈ ನಿಟ್ಟಿನಲ್ಲಿ ರಕ್ಷಣಾ ಕಾರ್ಯದರ್ಶಿ ರಾಜಿನಾಮೆ ನೀಡಿದ್ದಾರೆ.ಬದಲಿ ನೇಮಕಗೊಳ್ಳುವ ತನಕ ಅವರು ತಮ್ಮ ಹುದ್ದೆಯಲ್ಲೇ ಮುದುವರಿಯಲಿದ್ದಾರೆ. ಶ್ರೀಲಂಕಾ ಪೋಲೀಸ್ ಉನ್ನತಾಧಿಕಾರಿ ಪೂಜಿತ್ ಜಯಸುಂದರ ಕೂಡಾ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾಗಿ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಹೇಳಿದರು.

ಭಯೋತ್ಪಾದಕರಿಗೆ ದೇಶದ ಮುಸ್ಲಿಮರ ಬೆಂಬಲವಿಲ್ಲ- ಪ್ರಧಾನಿ ರನಿಲ್ ವಿಕ್ರಮಸಿಂಘೆ

ಕೊಲಂಬೋ: ಶ್ರೀಲಂಕಾದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯ ಹಿಂದಿರುವ ಶಕ್ತಿಗಳಿಗೆ ದೇಶದ ಮುಸ್ಲಿಮರ ಬೆಂಬಲವಿಲ್ಲ, ಅವರಿಗೆ ಈ ಬಗ್ಗೆ ಬಹಳ ಸಿಟ್ಟಿದೆ ಎಂದು ದೇಶದ ಪ್ರಧಾನಿ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ.

ಎನ್ ಡಿ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ವಿಕ್ರಮಸಿಂಘೆ ಅವರು, “ನಾವು ಎಲ್ಟಿಟಿಇ ಪ್ರಾರಂಭಿಸಿದ್ದ ಯುದ್ಧವನ್ನು ಸಂಪೂರ್ಣವಾಗಿ ನಿಲ್ಲಿಸಿದೆವು. ಭಯೋತ್ಪಾದನೆ ಹಾಗು ಆತ್ಮಹತ್ಯಾ ದಾಳಿಯೂ ಅದರ ಒಂದು ಭಾಗವಾಗಿತ್ತು. ಆದರೆ ಈಗ ಇದು ಸಂಪೂರ್ಣ ಭಿನ್ನ. ಇದು ಜಾಗತಿಕ ಭಯೋತ್ಪಾದನೆಯ ಭಾಗ . ಭಯೋತ್ಪಾದನೆ ಬೇರೆ ಬೇರೆ ರೂಪಗಳಲ್ಲಿ ಬರುತ್ತದೆ. ಅದನ್ನು ನಾವು ಎದುರಿಸಬೇಕು. ಇದರ ಹಿಂದಿರುವ ಸಂಘಟನೆಗೆ ಮುಸ್ಲಿಮರಲ್ಲಿ ಬಹಳ ದೊಡ್ಡ ಸಂಖ್ಯೆಯ ಜನರಿಂದ ಯಾವುದೇ ಬೆಂಬಲ ಇಲ್ಲ. ಮುಸ್ಲಿಮರಿಗೆ ಈ ಘಟನೆ ಬಗ್ಗೆ ಬಹಳ ಸಿಟ್ಟಿದೆ” ಎಂದು ಹೇಳಿದ್ದಾರೆ.

ಚರ್ಚುಗಳ ಮೇಲೆ ದಾಳಿಯಾಗಿದ್ದು ದಾಳಿ ಹಿಂದೆ ಇಸ್ಲಾಮಿಕ್ ಭಯೋತ್ಪಾದಕರು ಇರುವ ಶಂಕೆ ಇರುವುದರಿಂದ ದೇಶದಲ್ಲಿ ಶಾಂತಿ ಕದಡುವ ಸಾಧ್ಯತೆ ಇದೆಯೇ ಎಂದು ಕೇಳಿದ್ದಕ್ಕೆ, “ಇದು ಕೇವಲ ಕೆಲವು ವ್ಯಕ್ತಿಗಳ ಕೆಲಸ. ಇದು ದೇಶದ ಮುಸ್ಲಿಮರು ಬೆಂಬಲಿಸುವ ಸಂಘಟನೆ ಅಲ್ಲ. ಇದು ಶ್ರೀಲಂಕಾದ ಜನರಿಗೆ ಚೆನ್ನಾಗಿ ಗೊತ್ತಿದೆ. ಸ್ಫೋಟ ನಡೆದು ಈವರೆಗೂ ನಮ್ಮ ಗೌರವಾನ್ವಿತ ಕಾರ್ಡಿನಲ್, ಮಹಾನಾಯಕರು ( ಬೌದ್ಧ ಧರ್ಮಗುರುಗಳು ) ಹಾಗು ಉಲೇಮಾಗಳ ಸಹಕಾರದಿಂದ ಶಾಂತಿ ಕಾಪಾಡಿದ್ದೇವೆ. ಇನ್ನು ಮುಂದೆಯೂ ಇದನ್ನು ಕಾಪಾಡಿಕೊಂಡು ಹೋಗುವ ವಿಶ್ವಾಸವಿದೆ. ಸ್ವಲ್ಪ ಉದ್ವಿಗ್ನತೆ ಇರುತ್ತದೆ. ಅದು ಸಹಜ” ಎಂದು ವಿಕ್ರಮಸಿಂಘೆ ಪ್ರತಿಕ್ರಿಯಿಸಿದ್ದಾರೆ.

error: Content is protected !! Not allowed copy content from janadhvani.com