ನಮ್ಮೆಲ್ಲಾ ಓದುಗರಿಗೆ ಗಣರಾಜ್ಯೋತ್ಸವದ ಶುಭಾಶಯಗಳು

ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳು ಸುರಕ್ಷಿತರೇ…?!!

ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ವಿಭಿನ್ನ ಭಾಷೆ,ಧರ್ಮ ,ಸಂಸ್ಕೃತಿಗಳನ್ನೊಳಗೊಂಡ ಭಾರತವು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶವಾಗಿದೆ.1947 ಆಗಸ್ಟ್ ಹದಿನಾಲ್ಕರ ಮಧ್ಯರಾತ್ರಿಯು ಭಾರತವು ಸ್ವತಂತ್ರ್ಯಗೊಂಡ ನಂತರ ಆಗಸ್ಟ್ 29 ರಂದು ಡಾ.ಬಿ.ಆರ್ ಅಂಬೇಡ್ಕರ್ ರವರ ನೇತೃತ್ವದಲ್ಲಿ ಕರಡು ಸಮಿತಿಯ ನೇಮಕಾತಿಯನ್ನು ಮಾಡಲಾಯಿತು.ಈ ಸಮಿತಿಯು ಸಂವಿಧಾನದ ಕರುಡು ಪ್ರತಿಯನ್ನು ತಯಾರಿಸಿ ನವಂಬರ್ 4 1947 ರಂದು ಶಾಸನ ಸಭೆಯಲ್ಲಿ ಮಂಡಿಸಿತು.ನವಂಬರ್ 26 ,1949 ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ 26 ,1950 ರಂದು ಭಾರತದ ಸಂವಿಧಾನವು ಅಧಿಕೃತವಾಗಿ ಜಾರಿಗೆ ಬಂದವು.ಅಂದಿನಿಂದ ಪ್ರತೀ ವರ್ಷ ಜನವರಿ 26 ರಂದು ” ಗಣರಾಜ್ಯೋತ್ಸವ ದಿನ ” ವನ್ನಾಗಿ ಆಚರಿಸುತ್ತಾ ಬರುತ್ತಿದ್ದೇವೆ.

ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ವ್ಯವಸ್ಥೆಯಾಗಿದೆ ಪ್ರಜಾಪ್ರಭುತ್ವ. ಆದರೆ ಭವ್ಯ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಪಟ್ಟು ಸುದೀರ್ಘವಾದ ಆರೂವರೆ ದಶಕಗಳು ಕಳೆದರೂ ದೇಶಗಳು ಪ್ರಜೆಗಳು ಸುರಕ್ಷಿತರಾಗಿದ್ದಾರ ಅನ್ನುವ ಪ್ರಶ್ನೆಗಳು ಉದ್ಭವಿಸುತ್ತಲೇ ಇದೆ.

ಪ್ರಜಾಪ್ರಭುತ್ವ ದೇಶದಲ್ಲಿ ಸಮಾನ ನೀತಿಯನ್ನು ಹೊಂದಿದ ವ್ಯವಸ್ಥೆಯಿಂದು ಒಂದು ವರ್ಗದ ಕೈಗೊಂಬೆಗಳಾಗಿ ಮಾರ್ಪಾಡಾಗಿದೆ.ಜನಪ್ರತಿನಿಧಿಗಳನ್ನು ಹಣಬಲದಿಂದ ಆಯ್ಕೆ ಮಾಡುವಂತಹ ವ್ಯವಸ್ಥೆಗಳು ಇಲ್ಲಿ ಸೃಷ್ಟಿಯಾಗಿಬಿಟ್ಟಿದೆ.ಭವ್ಯ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಶಾಸನವನ್ನು ರಚಿಸಿದಂತಹ ಡಾ.ಬಿ.ಆರ್ ಅಂಬೇಡ್ಕರ್ ರವರ ನಿಧನವಾದ ದಿನದಂದು ಈ ದೇಶದ ಒಂದು ವರ್ಗದ ಆರಾಧನಾ ಕೇಂದ್ರವಾದ ಬಾಬರೀ ಮಸ್ಜಿದ್ ನನ್ನು ಹೊಡೆದುರುಳಿಸಿ ದೇಶದ ಸಾಮರಸ್ಯತೆಗೆ ಧಕ್ಕೆ ಮಾಡುವುದರ ಜತೆಗೆ ಅಂಬೇಡ್ಕರ್ ರವರ ನೆನಪುಗಳನ್ನು ಅಳಿಸುವಂತಹ ಪ್ರಯತ್ನಗಳು ನಡೆದವು.

ಆರು ದಶಕಗಳ ಸುದೀರ್ಘ ಕಾಲಾವಧಿಯಲ್ಲಿ ಈ ದೇಶವನ್ನು ಹಲವು ಪಕ್ಷಗಳು ಆಳ್ವಿಕೆ ನಡೆಸಿದರೂ ಈ ದೇಶದಲ್ಲಿನ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಾಣಿಸಲಂತೂ ಸಾಧ್ಯವಾಗಿಲ್ಲ.ಒಂದು ವರ್ಗ ಆಗರ್ಭ ಶ್ರೀಮಂತಿಕೆಯಲ್ಲಿ ಮೆರೆಯುವಾಗ ಬಡತನದ ಬೇಗುದಿಯಲ್ಲಿ ಅದೆಷ್ಟೋ ಮುದ್ದು ಕಂದಮ್ಮಗಳ ದಿನದ ಆಹಾರ ಕಸದ ತೊಟ್ಟಿಗಳಲ್ಲಿ ಅಳಿದುಳಿದ ಹಳಸಿದ ಅನ್ನಗಳಿಂದಾಗಿರುತ್ತೆ ಅನ್ನುವುದು ವಿಷಾದನೀಯ.
ಇಲ್ಲಿ ಆಡಳಿತ ನಡೆಸಿದಂತಹ ಎಲ್ಲಾ ರಾಜಕೀಯ ಪಕ್ಷಗಳು ದೇಶದ ಖಜಾನೆಯನ್ನು ಲೂಟಿ ಮಾಡಿ ತನ್ನ ಹಾಗೂ ಕುಟುಂಬದ ಉದ್ಧಾರವನ್ನು ಮಾಡಿದೆ ವಿನಃ ಇಲ್ಲಿನ ಪ್ರಜೆಗಳ ಕುರಿತಾದ ಚಿಂತನೆಗಳು ಮಾಡಲೇ ಇಲ್ಲ.

ಇಂದಿಗೂ ದೇಶದ ಹಲವು ಕಡೆ ಅಸಹಿಷ್ಣುತೆಯು ತಾಂಡವಾಡುತ್ತಲೇ ಇದೆ.ರಾಜಕೀಯ ಪಕ್ಷಗಳ ನೈತಿಕ ಮೌಲ್ಯಗಳು ಕುಸಿಯುತ್ತಿದೆ.ಸಾವಿರ ಅಪರಾಧಿಗಳು ರಕ್ಷಿಸಲ್ಪಟ್ಟರೂ ಒಬ್ಬನೇ ಒಬ್ಬ ನಿರಪರಾಧಿ ಶಿಕ್ಷಿಸಬಾರದು ಅನ್ನುವ ನಿಯಮವನ್ನು ಹೊಂದಿದ ದೇಶದಲ್ಲಿ ಗಡ್ಡ ಹಾಗೂ ಟೊಪ್ಪಿ ಧರಿಸಿದ ಅಥವಾ,ಮುಸ್ಲಿಂ ಅನ್ನುವ ಏಕೈಕ ಕಾರಣದಿಂದ ದೇಶದ ಉದ್ದಗಲದ ಜೈಲೊಳಗೆ ಅಮಾಯಕ ಮುಸ್ಲಿಂ ಯುವಕರು ಸಂಶಯದ ಆಧಾರದ ಮೇಲೆ ಬಂಧಿತರಾಗಿ ಕಷ್ಟದಾಯಕ ಜೀವನ ನಡೆಸುತ್ತಿದ್ದಾರೆ.ದಲಿತರೆನ್ನುವ ಏಕೈಕ ಕಾರಣಕ್ಕಾಗಿ ಅದೆಷ್ಟೋ ಮಂದಿ ಮೇಲ್ಜಾತಿಯವರ ದೌರ್ಜನ್ಯಕ್ಕೊಳಗಾಗಿ ಯಾತನೆ ಅನುಭವಿಸುತ್ತಿದ್ದಾರೆ.ದಲಿತ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಮರಕ್ಕೆ ನೇಣುಹಾಕಿಸುವಂತಹ ಸನ್ನಿವೇಶಗಳು ಕಾಣಸಿಗುತ್ತದೆ.ಕಾಲೇಜ್ ಕ್ಯಾಂಪಸ್ ಗಳು ಅಸಹಿಷ್ಣುತೆಯ ತಾಣಗಳಾಗಿ ಬದಲಾಗಿರುವುದರಿಂದ ರೋಹಿತ್ ವೇಮುಲ ನಂತಹ ಪ್ರತಿಭೆಗಳು ತಮ್ಮ ಜೀವದೊಂದಿಗೆ ಪ್ರತಿಭೆಗಳನ್ನೂ ನೇಣಿಗೆ ಶರಣಾಗಿಸುತ್ತಿದ್ದಾರೆ.ದಲಿತ, ಹಿಂದುಳಿದವರಿಗಾಗಿ ಮೀಸಲಾದ ಮೀಸಲಾತಿಯು ರಾಜಕೀಯ ವರ್ಗದ ಕೈಗೊಂಬೆಗಳಾಗಿ ತಾಂಡವಾಡುತ್ತಲೇ ಇದೆ.

ಪ್ರಪಂಚದ ಅತೀ ದೊಡ್ಡ ಜಾತ್ಯತೀತ ,ಪ್ರಜಾಪ್ರಭುತ್ವ ದೇಶವೆನ್ನುವ ಹೆಗ್ಗಳಿಕೆಯನ್ನು ಪಡೆದ ಭಾರತ ದೇಶದ ಡಾ.ಬಿ.ಆರ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಅಳಿಸಿ ಇಲ್ಲಿ ಮನುವಾದವನ್ನು ಸೃಷ್ಟಿಸಲು ಒಂದು ವರ್ಗ ತೆರೆಮರೆಯ ಪ್ರಯತ್ನ ನಡೆಯುವಾಗಲೆಲ್ಲಾ ದೇಶದಲ್ಲಿ ಅಸಹಿಷ್ಣುತೆಯ ಶಬ್ದಗಳು ಪ್ರತಿಧ್ವನಿಸುತ್ತಲೇ ಇದೆ.

ದೇಶವು ಮಗದೊಮ್ಮೆ ಗಣರಾಜ್ಯೋತ್ಸವದ ಸುದಿನದಲ್ಲಿರುವಾದ, ದೇಶಕ್ಕೆ ಆಂತರಿಕವಾಗಿಯೂ,ಬಾಹ್ಯವಾಗಿಯೂ ಬೆದರಿಕೆಯೊಡ್ಡುವ ದೇಶದ್ರೋಹಿಗಳು,ಮತೀಯವಾದಿಗಳ ಸದ್ದಡಗಲಿ ಎಂದು ಆಶಿಸುತ್ತಾ,ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜೆಗಳು ಇಲ್ಲಿನ ಒಂದು ವರ್ಗದ ಬಲಿಪಶುವಾಗದಿರಲಿ ಎನ್ನುತ್ತಾ ಸರ್ವರಿಗೂ ಭವ್ಯ ಭಾರತದ ಗಣರಾಜ್ಯೋತ್ಸವದ ಶುಭಾಶಯಗಳು.

ಸ್ನೇಹಜೀವಿ ಅಡ್ಕ

Leave a Reply

Your email address will not be published. Required fields are marked *

error: Content is protected !!