janadhvani

Kannada Online News Paper

ರಫೇಲ್‌ ಹಗರಣ ಮರುಪರಿಶೀಲನೆಗೆ ಸುಪ್ರೀಂ ಸಮ್ಮತಿ- ಕೇಂದ್ರಕ್ಕೆ ಮುಖಬಂಗ

ನವದೆಹಲಿ: ರಫೇಲ್‌ ಯುದ್ಧ ವಿಮಾನಗಳ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನೀಡಿರುವ ಕ್ಲೀನ್‌ ಚಿಟ್‌ ಅನ್ನು ಪ್ರಶ್ನೆ ಮಾಡಿ, ಮರುಪರಿಶೀಲನೆಗೆ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಆಕ್ಷೇಪಣಾ ಅರ್ಜಿಯನ್ನು ನ್ಯಾಯಾಲಯ ಇಂದು ತಿರಸ್ಕರಿಸಿದೆ.  

ಅ‌ದಲ್ಲದೇ, ಸದ್ಯ ರಕ್ಷಣಾ ಇಲಾಖೆಯಿಂದ ಕಳುವಾಗಿವೆ ಎಂದು ಹೇಳಲಾಗುತ್ತಿರುವ ಮೂರು ಪ್ರಮುಖ ದಾಖಲೆಗಳನ್ನು ಮರುಪರಿಶೀಲನಾ ಅರ್ಜಿಯಲ್ಲಿ ಸ್ಯಾಕ್ಷ್ಯವಾಗಿ ಪರಿಗಣಿಸಲು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. 

ರಫೇಲ್‌ ಖರೀದಿ ಒಪ್ಪಂದದ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ದಿ ಹಿಂದೂ ಪತ್ರಿಕೆಯೂ ಈ ವರೆಗೆ ರಕ್ಷಣಾ ಇಲಾಖೆಯ ಹಲವು ಮಹತ್ತರ ದಾಖಲೆಗಳನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ. ಸದ್ಯ ಮರು ಪರಿಶೀಲನಾ ಅರ್ಜಿಯಲ್ಲಿ ಪತ್ರಿಕಾ ವರದಿಯ ದಾಖಲೆಗಳನ್ನೂ ಸೇರಿಸಲಾಗಿದೆ. ಸುಪ್ರೀಂ ಕೋರ್ಟ್‌ ಈ ದಾಖಲೆಗಳನ್ನೇ ಸಾಕ್ಷ್ಯವಾಗಿ ಪರಿಗಣಿಸಿದೆ. 

ರಫೇಲ್‌ ಹಗರಣದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲಿನ್‌ ಚಿಟ್‌ ನೀಡಿದ್ದ ಸುಪ್ರೀಂ ಕೋರ್ಟ್‌ನ ಡಿ.14ರ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌, ನ್ಯಾ. ಸಂಜಯ್‌ ಕೌಲ್‌ ಮತ್ತು ಕೆಎಂ ಜೋಸೆಫ್‌ ಅವರಿದ್ದ ಪೀಠ ಇಂದು ಈ ತೀರ್ಪು ನೀಡಿದೆ.

ರಫೇಲ್‌ ಒಪ್ಪಂದದ ಮರುಪರಿಶೀಲನಾ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಲವು ಕುತೂಹಲಕಾರಿ ಚರ್ಚೆಗಳ ನಡೆದಿವೆ. ಮರುಪರಿಶೀಲನಾ ಅರ್ಜಿ ವಿಚಾರಣೆ ನಡೆಯುತ್ತಿರುವ ವೇಳೆಯೇ ರಾಷ್ಟ್ರೀಯ ಆಂಗ್ಲ ಪತ್ರಿಕೆ ದಿ ಹಿಂದೂ, ರಫೇಲ್‌ ಖರೀದಿ ಪ್ರಕ್ರಿಯೆಯ ಕುರಿತು ರಕ್ಷಣಾ ಇಲಾಖೆ ದಾಖಲೆಗಳನ್ನು ಉಲ್ಲೇಖಿಸಿ ಹಲವು ವರದಿಗಳನ್ನು ಪ್ರಕಟಿಸಿತ್ತು.

ದಿ ಹಿಂದೂ ತನ್ನ ವರದಿಗಳಿಗೆ ಆಶ್ರಯಿಸಿದ್ದ ದಾಖಲೆಗಳನ್ನೇ ಮರುಪರಿಶೀಲನಾ ಅರ್ಜಿಯಲ್ಲೂ ಅರ್ಜಿದಾರರು ಸೇರಿಸಿದ್ದರು. ರಕ್ಷಣಾ ಇಲಾಖೆಯ ದಾಖಲೆಗಳನ್ನು ಮರು ಪರಿಶೀಲನಾ ಅರ್ಜಿಯಲ್ಲಿ ಅರ್ಜಿದಾರರು ಸೇರಿಸಿರುವ ಕುರಿತು ಸುಪ್ರೀಂ ಕೋರ್ಟ್‌ ಪ್ರಶ್ನೆಗೆ ಉತ್ತರಿಸಿದ್ದ ಕೇಂದ್ರದ ಅಟಾರ್ನಿ ಜನರಲ್‌ ಕೆ.ಕೆ ವೇಣುಗೋಪಾಲ್‌, ‘ ರಫೇಲ್‌ ಒಪ್ಪಂದದ ಕೆಲವು ದಾಖಲೆಗಳು ರಕ್ಷಣಾ ಇಲಾಖೆಯಿಂದ ಕಳುವಾಗಿವೆ,’ ಎಂದು ಹೇಳಿಕೆ ದಾಖಲಿಸಿದ್ದರು.

ವೇಣುಗೋಪಾಲ್‌ ಅವರ ಈ ಹೇಳಿಕೆ ದೇಶಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿತ್ತು. ದಾಖಲೆಗಳನ್ನೇ ರಕ್ಷಿಸಿಕೊಳ್ಳದ ಕೇಂದ್ರ ದೇಶವನ್ನು ಹೇಗೆ ಕಾಯಲಿದೆ ಎಂಬು ಮೂದಲಿಕೆಗಳು ಕೇಂದ್ರದ ವಿರುದ್ಧ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅಟಾರ್ನಿ ಜನರಲ್‌ ವೇಣುಗೋಪಾಲ್‌, ‘ ದಾಖಲೆಗಳು ಕಳುವಾಗಿವೆ ಎಂದರೆ ಕಳ್ಳತನವಲ್ಲ. ಅಲ್ಲಿ ಸಲ್ಲಿಸಲಾಗಿರುವ ದಾಖಲೆಗಳು ಮೂಲ ಪ್ರತಿಯ ನಕಲು ಪ್ರತಿಗಳು,‘ ಎಂದಿದ್ದರು. ಅಲ್ಲದೆ, ರಕ್ಷಣಾ ಇಲಾಖೆಯಿಂದ ಸೋರಿಕೆಯಾಗಿರುವ, ಅಧಿಕೃತ ರಹಸ್ಯ ಕಾಯ್ದೆಗೆ ಸಂಬಂಧಿಸಿದ ಮತ್ತು ಸರ್ಕಾರದಿಂದ ದೃಢವಾಗದ ದಾಖಲೆಗಳನ್ನು ಸಾಕ್ಷ್ಯಗಳಾಗಿ ಪರಿಗಣಿಸಬಾರದು ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರದ ಪರ ಅಟಾರ್ನಿ ಜನರಲ್‌ ವೇಣುಗೋಪಾಲ್‌ ಕೋರಿದ್ದರು.

ಈ ನಡುವೆ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಪ್ರಾಥಮಿಕ ಆಕ್ಷೇಪಣೆ ಸಲ್ಲಿಸಿತ್ತು. ಆ ಅರ್ಜಿಯನ್ನು ಕೋರ್ಟ್‌ ಇಂದು ವಜಾಗೊಳಿಸಿದೆ.

error: Content is protected !! Not allowed copy content from janadhvani.com