janadhvani

Kannada Online News Paper

ಅಲ್ಪ ಸಂಖ್ಯಾತರ ವಿರುದ್ದದ ಹಿಂಸೆಗಳನ್ನು ತಡೆಯಲು ಶಾಸನ ತರಬೇಕು-ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಹೈದರಾಬಾದ್: ದೇಶದಲ್ಲಿ‌ ಅಲ್ಪ ಸಂಖ್ಯಾತರ ವಿರುದ್ದ ನಡೆಯುವ ಆಕ್ರಮಣಗಳನ್ನು ತಡೆಯಲು ಶಾಸನ ತರಬೇಕು ಎಂದು ಇಂಡಿಯನ್ ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಹೇಳಿದ್ದಾರೆ.

ಇಂಡಿಯನ್‌ ಗ್ರಾಂಡ್‌ ಮುಫ್ತಿಯಾಗಿ ನಿಯುಕ್ತಿಗೊಂಡ ನಂತರ ಅವರು ಪ್ರಥಮ ಬಾರಿಗೆ ಹೈದರಾಬಾದ್‌ಗೆ ಭೇಟಿ ನೀಡಿದಾಗ ಎ.ಪಿ. ಉಸ್ತಾದರನ್ನು ಗೌರವಿಸುವ ಸಲುವಾಗಿ ಹೆಸರಾಂತ ಇಸ್ಲಾಮಿಕ್ ವಿದ್ಯಾಲಯ ಜಾಮಿಯಾ ನಿಝಾಮಿಯಾ ಏರ್ಪಡಿಸಿದ ಶಾಂತಿ ಸಮ್ಮೇಳನದಲ್ಲಿ ಅವರು ಪ್ರಧಾನ ಭಾಷಣ ಮಾಡುತ್ತಿದ್ದರು.

ದೇಶದಲ್ಲಿ ಅಸ್ತಿತ್ವದಲ್ಲಿರುವ ಕಾನೂನುಗಳು ಮತ್ತು ನಾಗರಿಕ ಸಂರಕ್ಷಣಾ ನಿಯಮಗಳು ದೇಶದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧದ ಆಕ್ರಮಣಗಳನ್ನು ತಡೆಯುವಲ್ಲಿ ವಿಫಲವಾಗಿದೆ.
ಅಲ್ಪಸಂಖ್ಯಾತರ ವಿರುದ್ಧ ವ್ಯಾಪಕವಾಗಿ ನಡೆದ ಹಿಂಸಾಚಾರಗಳನ್ನು ಪ್ರಸ್ತುತ ಕಾನೂನುಗಳು ಆಕ್ರಮಣವಾಗಿ ಕೂಡ ಗುರುತಿಸುವುದಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದರು.

ಅದೇ ಸಮಯದಲ್ಲಿ ರಾಜಕೀಯ ಮತ್ತು ಸಾಮಾಜಿಕ ಹಿನ್ನೆಲೆಯ ಬದಲಾವಣೆಯನುಸಾರ ಅಲ್ಪಸಂಖ್ಯಾತರ ವಿರುದ್ಧದ ಆಕ್ರಮಣದ ಸ್ವರೂಪದಲ್ಲೂ ಬದಲಾವಣೆ ಉಂಟಾಗುತ್ತಿದೆ. ದುಷ್ಕೃತ್ಯಗಳು ಹೆಚ್ಚಾಗಿ ಭಯಾನಕ ಸ್ಥಿತಿ ನಿರ್ಮಾಣಗೊಂಡಿದೆ, ಆದರೆ ಶಿಕ್ಷೆಗೊಳಗಾಗುವವರ ಸಂಖ್ಯೆ ಕಡಿಮೆಯಾಗಿದೆ. ದಲಿತರ ವಿರುದ್ದದ ದೌರ್ಜನ್ಯವನ್ನು ತಡೆಯುವ ಕಾನೂನಿನಂತೆ ಅಲ್ಪಸಂಖ್ಯಾತರ ವಿರುದ್ಧದ ಹಿಂಸೆಗಳನ್ನು ತಡೆಗಟ್ಟಲು ಹೊಸ ಕಾನೂನನ್ನು ತರಬೇಕಾಗಿದೆ ಎಂದವರು ಹೇಳಿದರು.

ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಇದನ್ನು ಒಳಪಡಿಸಿ ಧಾರ್ಮಿಕ ಅಲ್ಪಸಂಖ್ಯಾತರೊಂದಿಗೆ ಐಕಮತ್ಯವನ್ನು ವ್ಯಕ್ತಪಡಿಸಬೇಕು. ನ್ಯೂಜಿಲೆಂಡ್ ನಲ್ಲಿನ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರಕಾರ ಭಯೋತ್ಪಾದನೆಯ ವಿರುದ್ದ ಅಳವಡಿಸಿಕೊಂಡ ಬೆಳವಣಿಗೆಗಳು ಭಯೋತ್ಪಾದನೆಯ ಸ್ವರೂಪವನ್ನೇ ಬದಲಾಯಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಜಾಮಿಯಾ ನಿಝಾಮಿಯಾಗೆ ತಲುಪಿದ ಗ್ರ್ಯಾಂಡ್ ಮುಫ್ತಿಯವರನ್ನು ಅಲ್ಲಿನ ಸಾರಥಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಬರಮಾಡಿಕೊಂಡರು. ನಿಝಾಮಿಯಾದ ಚಾನ್ಸೆಲರ್ ಮುಫ್ತಿ ಖಲೀಲ್ ಅಹ್ಮದ್ ಶಾಂತಿ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಹೈದರಾಬಾದ್ ಮುಫ್ತಿ ಮೌಲಾನಾ ಅಝೀಮುದ್ದೀನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶೈಖ್ ಮುಹಮ್ಮದ್ ಖಾಲಿದ್ ಅಝ್ಹರಿ, ಸೈಯದ್ ವಾಹಿದ್ ಅಲಿ ನಿಝಾಮಿ, ಎನ್.ಅಲಿ ಅಬ್ದುಲ್ಲಾ, ಡಾ. ಅಬೂಬಕರ್ ನಿಝಾಮಿ ಮಾತನಾಡಿದರು.

ಜಾಮಿಯಾ ನಿಝಾಮಿಯಾ ಮತ್ತು ಮರ್ಕಝ್ ನಡುವೆ ಪರಸ್ಪರ ಶೈಕ್ಷಣಿಕ ಸಹಕಾರ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಯಿತು.

error: Content is protected !! Not allowed copy content from janadhvani.com