janadhvani

Kannada Online News Paper

ದೇಶವನ್ನು ಲೂಟಿ ಹೊಡೆದವರಿಗೆ ಮೋದಿ ಕಾವಲುಗಾರ-ರಾಹುಲ್

ಕಲಬುರ್ಗಿ: ಮೋದಿ ಪ್ರಧಾನಿಯಾದ ‘ನಾನು ಕಾವಲುಗಾರನಾಗಿರುವೆ’ ಎಂದಿದ್ದರು. ಆದರೆ, ಅವರು ಕಾವಲುಗಾರನಾಗಿದ್ದು ಯಾರಿಗೆ? ಎಂದು ಪ್ರಶ್ನಿಸಿದ ರಾಹುಲ್‌ ಗಾಂಧಿ, ತಾವೇ ಉತ್ತರವನ್ನೂ ನೀಡಿದರು. ‘ಅನಿಲ್‌ ಅಂಬಾನಿ, ನೀರವ್‌ ಮೋದಿ, ವಿಜಯ್‌ ಮಲ್ಯ’ ಇವರಿಗೆ ಕಾವಲುಗಾರನಾಗಿದ್ದಾರೆ ಎಂದರು.

ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ, ಬೆಲೆ ಏರಿಕೆ ಹಾಗೂ ಅನಿಲ್ ಅಂಬಾನಿಗೆ ಗುತ್ತಿಗೆ ನೀಡಿದ ವಿಷಯಗಳನ್ನು ರಾಹುಲ್‌ ಪ್ರಸ್ತಾಪಿಸುವ ಮೂಲಕ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಇಲ್ಲಿನ ನೂತನ ವಿಶ್ವವಿದ್ಯಾಲಯ ಮೈದಾನದಲ್ಲಿ ಸೋಮವಾರ ನಡೆಯುತ್ತಿರುವ ಪರಿವರ್ತನಾ ರ್‍ಯಾಲಿಯಲ್ಲಿ ಮಾತನಾಡಿದರು. 

ಕರ್ನಾಟಕದ ಯುವಜನತೆಯನ್ನು ಉದ್ದೇಶಿಸಿ, ಮೋದಿ ನಿಮ್ಮಿಂದ ಉದ್ಯೋಗ ಕಸಿದುಕೊಂಡಿದ್ದಾರೆ ಎಂದರು. ಕರ್ನಾಟಕದ ಯುವಜನತೆ ಮೋದಿ ಅವರಲ್ಲಿ ಉದ್ಯೋಗ ಕೇಳುತ್ತಿದ್ದರೆ, ನಿಮ್ಮಿಂದಲೇ ಅವರು ಉದ್ಯೋಗ ಕಸಿದಿದ್ದಾರೆ. ಎಚ್‌ಎಎಲ್‌ ವಿಮಾನಗಳನ್ನು ನಿರ್ಮಿಸಬೇಕು, ಅದೇ ರೀತಿ ಆಗಿದ್ದರೆ ನಿಮಗೆ ಉದ್ಯೋಗ ದೊರೆಯುತ್ತಿತ್ತು. ಆದರೆ, ಕಾವಲುಗಾರ ಎಂದಿಗೂ ವಿಮಾನ ತಯಾರಿಸಿರದ ಅನಿಲ್‌ ಅಂಬಾನಿಗೆ ಆ ಅವಕಾಶವನ್ನು ನೀಡಲು ಬಯಸಿದರು ಎಂದು ಟೀಕಿಸಿದರು.

ರಫೇಲ್‌ ಒಪ್ಪಂದದ ಕುರಿತು ಸಿಬಿಐ ಮುಖ್ಯಸ್ಥರು ತನಿಖೆ ಕೈಗೊಳ್ಳಲು ನಿರ್ಧರಿಸಿದ್ದರು. ಆದರೆ, ಕಾವಲುಗಾರ ಮಧ್ಯರಾತ್ರಿ ಅವರನ್ನು ಸ್ಥಾನದಿಂದ ತೆರವುಗೊಳಿಸಿದರು. ಅವರಿಗೆ ಮತ್ತೆ ಹಿಂದಿನ ಸ್ಥಾನ ನೀಡುವಂತೆ ಸುಪ್ರೀಂ ಕೋರ್ಟ್‌ ಆದೇಶಿಸಿತು, ಮತ್ತೆ ಕಾವಲುಗಾರ ಅವರನ್ನು ಕೆಲವೇ ಗಂಟೆಗಳಲ್ಲಿ ಕೆಳಗಿಳಿಸಿದರು ಎಂದು ರಾಹುಲ್‌ ಗಾಂಧಿ ಆರೋಪಿಸಿದರು. 

’ಎಲ್ಲರ ಮುಂದೆ ಸಿಕ್ಕಿ ಹಾಕಿಕೊಂಡ ನಂತರದಲ್ಲಿ ಕಾವಲುಗಾರ, ಇಡೀ ರಾಷ್ಟ್ರದ ಎಲ್ಲರೂ ಕಾವಲುಗಾರರು ಎನ್ನುತ್ತಿದ್ದಾರೆ. ಅವರು ಸಿಕ್ಕಿಕೊಳ್ಳುವುದಕ್ಕಿಂತಲೂ ಮುನ್ನ ಅವರನ್ನು ಹೊರತು ಪಡಿಸಿ ದೇಶದ ಯಾರೊಬ್ಬರೂ ಕಾವಲುಗಾರರು ಆಗಿರಲಿಲ್ಲ. ಇಡೀ ದೇಶಕ್ಕೆ ತಿಳಿದಿದೆ…ಚೌಕಿದಾರ್‌(ಕಾವಲುಗಾರ)…’ ಎನ್ನುತ್ತಿದ್ದಂತೆ ಸಭಿಕರು ’ಚೋರ್‌ ಹೈ..’(ಕಳ್ಳ) ಎಂದು ಪ್ರತಿಕ್ರಿಯಿಸಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್‌ ಅವರು ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ ಸ್ಪರ್ಧಿಸುವಂತೆ ರಾಹುಲ್‌ ಗಾಂಧಿ ಅವರಿಗೆ ಒತ್ತಾಯಿಸಿದರು. 

ಎರಡು ನಿಮಿಷ ಮೌನಾಚರಿಸುವ ಮೂಲಕ ಭಾನುವಾರ ನಿಧನರಾದ ಗೋವಾ ಮುಖ್ಯಮಂತ್ರಿ ಮನೋಹರ್‌ ಪರ್ರೀಕ್ಕರ್‌ ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು. 

ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ಎಂ.ಬಿ.ಪಾಟೀಲ, ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ, ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಕಾಂಗ್ರೆಸ್‌ ಮುಖಂಡರು ಭಾಗಿಯಾಗಿದ್ದಾರೆ. 

error: Content is protected !! Not allowed copy content from janadhvani.com