janadhvani

Kannada Online News Paper

‘ಬೋಯಿಂಗ್ 737 ಮ್ಯಾಕ್ಸ್’ ನಿಷೇಧ- 14 ವಿಮಾನಗಳ ಹಾರಾಟ ರದ್ದುಗೊಳಿಸಿದ ಸ್ಪೈಸ್‌ಜೆಟ್‌

ನವದೆಹಲಿ: ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ದೇಶದಲ್ಲಿ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳ ಹಾರಾಟ ನಿಷೇಧಿಸಿರುವುದರಿಂದ ಸ್ಪೈಸ್‌ಜೆಟ್‌ ಬುಧವಾರ 14 ವಿಮಾನಗಳ ಹಾರಾಟ ರದ್ದುಗೊಳಿಸಿತು.

ಸ್ಪೈಸ್‌ ಜೆಟ್‌ನ ವಾಯುಯಾನ ಸೇವೆಯಲ್ಲಿ ಇಂತಹ ಇನ್ನೂ 12 ವಿಮಾನಗಳು ಇವೆ. ಸದ್ಯ 14 ವಿಮಾನಗಳ ಹಾರಾಟವನ್ನು ಮಾತ್ರ ಬುಧವಾರ ರದ್ದುಗೊಳಿಸಿದೆ. ಗುರುವಾರ ಹೆಚ್ಚುವರಿ ವಿಮಾನಗಳು ಕಾರ್ಯಾಚರಿಸಲಿವೆ ಎಂದು ಹೇಳಿದೆ.

‘ಹಾರಾಟ ನಡೆಸುವಂತಹ 76 ವಿಮಾನಗಳು ಇದ್ದು, ಇದರಲ್ಲಿ 64 ವಿಮಾನಗಳು ಕಾರ್ಯಾಚರಣೆ ನಡೆಸುತ್ತಿವೆ. ಪ್ರಯಾಣಿಕರಿಗೆ ಎದುರಾಗುವ ಅನಾನುಕೂಲ ತಗ್ಗಿಸುವ ಮತ್ತು ನಮ್ಮ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರುವುದರಲ್ಲಿ ನಾವು ವಿಶ್ವಾಸ ಹೊಂದಿದ್ದೇವೆ’ ಎಂದು ಸ್ಪೈಸ್‌ ಜೆಟ್‌ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಇಥಿಯೋಪಿಯಾದ ಅಡಿಸ್‌ ಅಬಾಬದಲ್ಲಿ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನ ಭಾನುವಾರ ಪತನಗೊಂಡು ನಾಲ್ವರು ಭಾರತೀಯರು ಸೇರಿ 157 ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು. ಈ ಘಟನೆಯ ನಂತರ, ಡಿಜಿಸಿಎ ಈ ಮಾದರಿಯ ಎಲ್ಲ ವಿಮಾನಗಳ ಹಾರಾಟವನ್ನು ಭಾರತದಲ್ಲಿ ತಕ್ಷಣದಿಂದಲೇ ನಿಷೇಧಿಸಿ ಮಂಗಳವಾರ ರಾತ್ರಿ ಆದೇಶ ಹೊರಡಿಸಿತ್ತು.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಯನ್‌ ಏರ್‌ ಸಂಸ್ಥೆಗೆ ಸೇರಿದ ಇದೇ ಮಾದರಿಯ ಬೊಯಿಂಗ್‌ ವಿಮಾನ ಇಂಡೋನೇಷ್ಯಾದಲ್ಲಿ ಪತನವಾಗಿ 180 ಪ್ರಯಾಣಿಕರು ಮೃತಪಟ್ಟಿದ್ದರು. ಯುರೋಪ್‌ ಒಕ್ಕೂಟ ಮತ್ತು ವಿಶ್ವದ ಹಲವು ದೇಶಗಳು ಈಗಾಗಲೇ ಎಲ್ಲ ವಿಮಾನಯಾನ ಸಂಸ್ಥೆಗಳಿಗೆ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನಗಳನ್ನು ಬಳಸದಂತೆ ನಿಷೇಧ ಹೇರಿವೆ.

error: Content is protected !! Not allowed copy content from janadhvani.com