janadhvani

Kannada Online News Paper

ಪ್ರಧಾನಿಯನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ

ನವದೆಹಲಿ, ಮಾ.9- ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ ಹಾಗೂ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡರು.

ಇತ್ತೀಚೆಗೆ ರಾಜ್ಯ ಭೂ ಕುಸಿತ ಹಾಗೂ ಬರ ಪರಿಸ್ಥಿತಿಗೆ ಈಡಾಗಿದೆ. ಕೊಡಗು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತಿವೃಷ್ಟಿ ಹಾಗೂ ಭೂ ಕುಸಿತದಿಂದ ತೀವ್ರ ಹಾನಿ ಸಂಭವಿಸಿದೆ.ಅದೇ ರೀತಿ ರಾಜ್ಯದ 100 ತಾಲ್ಲೂಕುಗಳಲ್ಲಿ ಮಳೆಯಿಲ್ಲದೆ ಬರ ಪರಿಸ್ಥಿತಿ ತಲೆದೋರಿತ್ತು.

ಇದಕ್ಕೆ ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿಗಳ ಪ್ರಕಾರ 2434 ಕೋಟಿ ರೂ. ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಮನವಿ ಸಲ್ಲಿಸಿದ್ದರೂ ಕೇಂದ್ರ ಸರ್ಕಾರ ಈ ಮೊತ್ತದ ಕೇವಲ ಶೇ. 50ಕ್ಕೂ ಕಡಿಮೆ ಅಂದರೆ 949.49 ಕೋಟಿ ರೂ. ಪರಿಹಾರ ಮಂಜೂರು ಮಾಡಿದೆ.

ಹಿಂಗಾರಿನ ಅವಧಿಯಲ್ಲಿ ರಾಜ್ಯದಲ್ಲಿ ವಾಡಿಕೆ 188 ಮಿ.ಮೀ. ಮಳೆಯಾಗಬೇಕಾಗಿದ್ದು, ಕೇವಲ 96 ಮಿ.ಮೀ. ಮಳೆ ಆಗಿದ್ದು, ಉತ್ತರ ಒಳನಾಡಿನಲ್ಲಿ ಶೇ.66ರಷ್ಟು ಮಳೆ ಕೊರತೆ ಉಂಟಾಗಿತ್ತು. ರಾಜ್ಯದ 176 ತಾಲ್ಲೂಕುಗಳಲ್ಲಿ 156 ತಾಲ್ಲೂಕುಗಳು ಬರಪೀಡಿತವೆಂದು ಘೋಷಿಸಲಾಗಿದೆ.

ಇದರಲ್ಲಿ 107 ತಾಲ್ಲೂಕುಗಳನ್ನು ತೀವ್ರ ಬರ ಪೀಡಿತ ಹಾಗೂ 49 ತಾಲ್ಲೂಕುಗಳನ್ನು ಸಾಧಾರಣ ಬರಪೀಡಿತ ಎಂದು ಗುರುತಿಸಲಾಗಿದೆ. ಹಿಂಗಾರು ಅವಧಿಯಲ್ಲಿ 11,384.47 ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಉಂಟಾಗಿದೆ.

ಮುಂಗಾರು, ಹಿಂಗಾರು ಮತ್ತು ಹಂಗಾಮುಗಳೆರಡರಲ್ಲಿಯೂ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ 32,335 ಕೋಟಿ ರೂ. ಗಳಷ್ಟು ನಷ್ಟ ಉಂಟಾಗಿದೆ. ಇದು ರಾಜ್ಯದ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ರಾಜ್ಯ ಸರ್ಕಾರ ತ್ವರಿತ ಕ್ರಮ ತೆಗೆದುಕೊಂಡಿದ್ದು, ಎಸ್‍ಡಿಆರ್‍ಎಫ್ ನಿಧಿಯಲ್ಲದೆ ರಾಜ್ಯ ಸರ್ಕಾರದಿಂದ 386 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.

ಕುಡಿಯುವ ನೀರು, ಮೇವು ಒದಗಿಸುವುದರ ಜತೆಗೆ ಜನರಿಗೆ ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ 8.18 ಕೋಟಿ ಮಾನವ ದಿನಗಳನ್ನು ಸೃಜಿಸಲಾಗಿದೆ.

ಇದಕ್ಕಾಗಿ ಬಾಕಿ ಉಳಿದಿರುವ 1351 ಕೋಟಿ ರೂ.ಗಳಷ್ಟು ವೇತನ ಹಾಗೂ ಸಾಮಗ್ರಿ ವೆಚ್ಚದ ಕೇಂದ್ರದ ಪಾಲಿನ ಅನುದಾನ ಬಿಡುಗಡೆ ನಿರೀಕ್ಷಿಸಿ ರಾಜ್ಯ ಸರ್ಕಾರವೇ ಬಿಡುಗಡೆ ಮಾಡಿದೆ. ಆದ್ದರಿಂದ ಈ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳು, ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಿದರು.

ಇದಲ್ಲದೆ, ಈಗಾಗಲೇ ಭಾರತ ಸರ್ಕಾರಕ್ಕೆ ರಾಜ್ಯವು ಪ್ರಸ್ತಾವನೆ ಸಲ್ಲಿಸಿರುವಂತೆ ಬರ ಪರಿಹಾರ ಹಾಗೂ ನಿರ್ವಹಣೆಗೆ ಎಸ್‍ಡಿಆರ್‍ಎಫ್, ಎನ್‍ಡಿಆರ್‍ಎಫ್ ಮಾರ್ಗಸೂಚಿಯನ್ವಯ ಅಗತ್ಯವಿರುವ 2064.30 ಕೋಟಿ ರೂ. ಗಳ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡುವಂತೆಯೂ ಸಿಎಂ ಅವರು ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.

ಸತತ ಬರಗಾಲ, ಅನಿಶ್ಚಿತ ಮಳೆಯ ಪರಿಣಾಮವಾಗಿ ಸಂಕಷ್ಟಕ್ಕೊಳಗಾಗಿರುವ ರೈತರ ನೆರವಿಗೆ ಸರ್ಕಾರಗಳು ಧಾವಿಸಬೇಕಾದ್ದು ಅಗತ್ಯವಾದ್ದರಿಂದ ಕೂಡಲೇ ಈ ಅನುದಾನ ಬಿಡುಗಡೆ ಮಾಡುವಂತೆ ಅವರು ಕೋರಿದರು.

error: Content is protected !! Not allowed copy content from janadhvani.com