janadhvani

Kannada Online News Paper

ನೂತನ ಉಳ್ಳಾಲ ತಾಲೂಕಿಗೆ ‘ದೇರಳಕಟ್ಟೆ-ನಾಟೆಕಲ್’ ಮಧ್ಯೆ ಕೇಂದ್ರ ಸ್ಥಾನ ತೆರೆಯಲು ಸಿದ್ಧತೆ

ಮಂಗಳೂರು: ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶೇ.90ರಷ್ಟು ಭಾಗವನ್ನು ಒಳಗೊಂಡಂತೆ ರಚಿಸಲಾಗುವ ‘ಉಳ್ಳಾಲ’ ತಾಲೂಕಿಗೆ ‘ದೇರಳಕಟ್ಟೆ-ನಾಟೆಕಲ್’ ಮಧ್ಯೆ ಕೇಂದ್ರ ಸ್ಥಾನ ತೆರೆಯಲು ಸಿದ್ಧತೆ ನಡೆಯುತ್ತಿದೆ. ತಾಲೂಕು ರಚನೆಗೆ ಸದ್ದಿಲ್ಲದೆ ಸಿದ್ಧತೆ ನಡೆಸಿದ್ದ ಸ್ಥಳೀಯ ಶಾಸಕರೂ ಆಗಿರುವ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಾಲೂಕಿನ ಕೇಂದ್ರ ಸ್ಥಾನವನ್ನು ಗುರುತಿಸುವಲ್ಲಿ ಪ್ರಯತ್ನ ಆರಂಭಿಸಿದ್ದಾರೆ.

‘ಉಳ್ಳಾಲ’ ತಾಲೂಕಿಗೆ ಉಳ್ಳಾಲ ನಗರಸಭೆ, ಕೋಟೆಕಾರ್ ಪಟ್ಟಣ ಪಂಚಾಯತ್, ಸೋಮೇಶ್ವರ (ಭವಿಷ್ಯದಲ್ಲಿ ಪುರಸಭೆ) ಮತ್ತು ತಲಪಾಡಿ, ಕಿನ್ಯ, ಮಂಜನಾಡಿ, ಮುನ್ನೂರು, ಅಂಬ್ಲಮೊಗರು, ಬೆಳ್ಮ, ಕೊಣಾಜೆ, ಹರೇಕಳ, ಪಾವೂರು, ಬೋಳಿಯಾರು ಹಾಗೂ ಬಂಟ್ವಾಳ ತಾಲೂಕಿನ ನರಿಂಗಾನ, ಬಾಳೆಪುಣಿ-ಕೈರಂಗಳ, ಕುರ್ನಾಡು, ಪಜೀರ್, ಇರಾ, ಸಜಿಪ ನಡು, ಸಜಿಪ ಪಡು ಗ್ರಾಮಗಳು ಸೇರ್ಪಡೆಗೊಳ್ಳಲಿದೆ. ಇನ್ನು ರಾ.ಹೆ. 75ರ ಬಳಿಯ ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲೇ ಇರುವ ಮೇರಮಜಲು-ಕೊಡ್ಮಣ್, ಪುದು, ತುಂಬೆ ಗ್ರಾಮಗಳು ಎಂದಿನಂತೆ ಬಂಟ್ವಾಳ ತಾಲೂಕಿನಲ್ಲೇ ಇರಲಿವೆ.

ಮಂಗಳೂರು ನಾಲ್ಕು ಹೋಳು: ಮಂಗಳೂರು ತಾಲೂಕು ರಾಜ್ಯದಲ್ಲೇ ಅತೀ ದೊಡ್ಡ ತಾಲೂಕು ಆಗಿದೆ. ಇದರ ವಿಸ್ತೀರ್ಣ 922 ಚ.ಕಿ.ಮೀ. ಇದೆ. ಮಂಗಳೂರು, ಮಂಗಳೂರು ಉತ್ತರ ಮತ್ತು ಮಂಗಳೂರು ದಕ್ಷಿಣ ಹಾಗೂ ಮೂಡುಬಿದಿರೆ ವಿಧಾನ ಸಭಾ ಕ್ಷೇತ್ರವೂ ಇದೆ. ಅದಲ್ಲದೆ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ನಗರಸಭೆ, ಮೂಡುಬಿದಿರೆ ಪುರಸಭೆ, ಮುಲ್ಕಿ ಮತ್ತು ಕೋಟೆಕಾರ್ ಪಟ್ಟಣ ಪಂಚಾಯತ್‌ನ್ನೂ ಹೊಂದಿವೆ.

ಮಂಗಳೂರು (ಉಳ್ಳಾಲ) ವಿಧಾನ ಸಭಾ ಕ್ಷೇತ್ರಕ್ಕೆ ಬಂಟ್ವಾಳ ತಾಲೂಕಿನ ಕೆಲವು ಗ್ರಾಮಗಳು ಸೇರಿತ್ತಾದರೂ ಹೊಸ ತಾಲೂಕಿನ ಬಲವಾದ ಬೇಡಿಕೆಯೇನೂ ಇರಲಿಲ್ಲ. ಮುಲ್ಕಿ-ಮೂಡುಬಿದಿರೆ ತಾಲೂಕಿಗಾಗಿ ಅಲ್ಲಿನ ಜನರ ಕೂಗಿಗೆ ಸರಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ಉಳ್ಳಾಲ ಭಾಗದ ಜನರು ಹೊಸ ತಾಲೂಕಿನ ಬಗ್ಗೆ ಹೆಚ್ಚು ಆಸಕ್ತಿ ವಹಿಸಿರಲಿಲ್ಲ. ಆದರೆ, ಸಚಿವ ಯು.ಟಿ.ಖಾದರ್ ಸದ್ದಿಲ್ಲದೆ ಕಡತಗಳನ್ನು ಸಿದ್ಧಪಡಿಸಿ ನೇರವಾಗಿ ಮುಖ್ಯಮಂತ್ರಿಯ ಒಪ್ಪಿಗೆ ಪಡೆದ ಬಳಿಕ ಘೋಷಿಸಿದ್ದಾರೆ. ಹಾಗಾಗಿ, ರಾಜ್ಯದಲ್ಲೇ ವಿಸ್ತೀರ್ಣದಲ್ಲಿ ಅತೀ ದೊಡ್ಡ ತಾಲೂಕು ಎಂದು ಗುರುತಿಸಲ್ಪಟ್ಟಿದ್ದ ‘ಮಂಗಳೂರು’ ಈಗ ಮುಲ್ಕಿ, ಮೂಡುಬಿದಿರೆಯಲ್ಲದೆ ‘ಉಳ್ಳಾಲ’ ಪ್ರತ್ಯೇಕ ತಾಲೂಕು ಆಗಲಿರುವುದರಿಂದ ನಾಲ್ಕು ಹೋಳುಗಳಾದಂತಾಗಿದೆ. ಮುಲ್ಕಿ-ಮೂಡುಬಿದಿರೆ ತಾಲೂಕಿಗೆ ಈಗಾಗಲೆ ವಿಶೇಷ ತಹಶೀಲ್ದಾರರ ನೇಮಕ ಆಗಿದ್ದು, ಮಾ.6ಕ್ಕೆ ಈ ಎರಡೂ ಹೊಸ ತಾಲೂಕುಗಳು ಅಸ್ತಿತ್ವಕ್ಕೆ ಬರಲಿವೆ.

ಮಂಗಳೂರು ತಾಲೂಕಿನಲ್ಲಿ ಈ ಹಿಂದೆ 148 ಗ್ರಾಮಗಳಿದ್ದವು. ಇದೀಗ ಉಳ್ಳಾಲ, ಮುಲ್ಕಿ, ಮೂಡುಬಿದಿರೆಯು ಹೊಸ ತಾಲೂಕು ಆಗಲಿರುವುದರಿಂದ ಮಂಗಳೂರು ತಾಲೂಕಿನಲ್ಲಿರುವುದು ಇನ್ನೂ ಕೇವಲ 76 ಗ್ರಾಮಗಳು ಮಾತ್ರ. ಈ ಹಿಂದೆ ಮಂಗಳೂರು ತಾಲೂಕಿನಲ್ಲಿ 6 ಹೋಬಳಿಗಳು ಅಂದರೆ ಮಂಗಳೂರು ‘ಎ’ (14 ಗ್ರಾಮಗಳು), ಮಂಗಳೂರು ‘ಬಿ’ (22 ಗ್ರಾಮಗಳು), ಸುರತ್ಕಲ್ (28 ಗ್ರಾಮಗಳು), ಗುರುಪುರ (26 ಗ್ರಾಮಗಳು), ಮುಲ್ಕಿ (30 ಗ್ರಾಮಗಳು), ಮೂಡುಬಿದಿರೆ (28 ಗ್ರಾಮಗಳು) ಇತ್ತು. ಇದೀಗ ಮಂಗಳೂರು ‘ಎ’ಯ 14, ಮಂಗಳೂರು ‘ಬಿ’ಯ 8, ಸುರತ್ಕಲ್‌ನ 28, ಗುರುಪುರದ 26 ಗ್ರಾಮಗಳ ಸಹಿತ ಕೇವಲ 76 ಗ್ರಾಮಗಳು ಮಾತ್ರ ಮಂಗಳೂರು ತಾಲೂಕಿನಲ್ಲಿ ಉಳಿಯಲಿವೆ. ಗುರುಪುರದ 26 ಗ್ರಾಮಗಳನ್ನು ಮೂಡುಬಿದಿರೆ ತಾಲೂಕಿಗೆ ಸೇರ್ಪಡೆಗೊಳಿಸುವ ಪ್ರಸ್ತಾಪವಿತ್ತಾದರೂ ಕೂಡ ಸ್ಥಳೀಯರ ವಿರೋಧದ ಹಿನ್ನ್ನೆಲೆಯಲ್ಲಿ ಸದ್ಯ ಅದು ಕಡತದಲ್ಲೇ ಬಾಕಿಯಾಗಿದೆ.

ಅಂದಹಾಗೆ ತಾಲೂಕು ಘೋಷಣೆಯಾದ ಬಳಿಕ ಗಜೆಟ್ ನೋಟಿಫಿಕೇಶನ್ ಆಗಬೇಕಿದೆ. ನಂತರ ಸಾರ್ವಜನಿಕರ ಆಕ್ಷೇಪಣೆಯನ್ನು ಸರಕಾರ ಆಲಿಸಲಿದೆ. ಬಳಿಕ ಗ್ರಾಮಗಳ ಗಡಿ ಗುರುತು ನಡೆಯಲಿದೆ. ನಂತರ ಅಧಿಸೂಚನೆ ಹೊರಡಿಸಲಿವೆ. ಅದಾದ ಬಳಿಕ ತಾಲೂಕು ಕೇಂದ್ರಕ್ಕೆ ಸ್ಥಳ ಪರಿಶೀಲನೆ, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ, ಕಾಮಗಾರಿ ಇತ್ಯಾದಿ ನಡೆಯಲಿದೆ. ಒಟ್ಟಿನಲ್ಲಿ ಹೊಸ ತಾಲೂಕು ಘೋಷಣೆಯಾದ ಬಳಿಕ ಅಸ್ತಿತ್ವಕ್ಕೆ ಬರಲು ಕನಿಷ್ಠ 3-4 ವರ್ಷಗಳು ಬೇಕು. ಆದರೆ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಕೇಂದ್ರ ಸ್ಥಾನ ಗುರುತಿಸಿ ಹೊಸ ತಾಲೂಕಿನ ಅಸ್ತಿತ್ವಕ್ಕೆ ವೇಗ ನೀಡಲು ನಿರ್ಧರಿಸಿರುವುದು ಸ್ಥಳೀಯರಿಂದ ಸಂತಸ ವ್ಯಕ್ತವಾಗುತ್ತಿವೆ.

‘ಉಳ್ಳಾಲ’ವೋ? ಮಂಗಳೂರು ಗ್ರಾಮಾಂತರವೋ?

ಉಳ್ಳಾಲ ಹೊಸ ತಾಲೂಕು ಆಗಲಿದೆ ಎಂದು ಸಚಿವರು ಘೋಷಿಸಿದ್ದರೂ ಹೊಸ ತಾಲೂಕಿನ ಹೆಸರು ಉಳ್ಳಾಲವೇ ಅಥವಾ ಮಂಗಳೂರು ಗ್ರಾಮಾಂತರವೇ ಎಂಬ ಜಿಜ್ಞಾಸೆ ಶುರುವಾಗಿದೆ. ಈ ಹಿಂದೆ ಉಳ್ಳಾಲ ವಿಧಾನ ಸಭಾ ಕ್ಷೇತ್ರವಾಗಿದ್ದುದು ಬಳಿಕ ‘ಮಂಗಳೂರು’ ಕ್ಷೇತ್ರವಾಯಿತು. ಇದೀಗ ಭಾಗಶಃ ಒಂದು ವಿಧಾನಸಭಾ ಕ್ಷೇತ್ರವೇ ತಾಲೂಕು ಆಗಲಿರುವುದರಿಂದ ಈ ತಾಲೂಕಿಗೆ ಯಾವ ಹೆಸರು ಮೂಡಿ ಬರಲಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿದೆ. ವಿಧಾನಸಭಾ ಕ್ಷೇತ್ರದ ಹೆಸರನ್ನು ‘ಮಂಗಳೂರು’ ಎಂದು ಉಳಿಸುವ ನಿಟ್ಟಿನಲ್ಲಿ ಸಚಿವ ಖಾದರ್ ‘ಉಳ್ಳಾಲ’ದ ಬದಲು ‘ಮಂಗಳೂರು ಗ್ರಾಮಾಂತರ’ ಎಂದು ಉಲ್ಲೇಖಿಸಿದರೆ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಮಂಗಳೂರು ಗ್ರಾಮಾಂತರ ಎಂಬ ಹೆಸರಿನ ಬದಲು ಐತಿಹಾಸಿಕ ‘ಉಳ್ಳಾಲ’ ಹೆಸರೇ ಹೊಸ ತಾಲೂಕಿಗೆ ಸೂಕ್ತ ಎಂಬ ಸಲಹೆಯೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ದೇರಳಕಟ್ಟೆ: ತೊಕ್ಕೊಟ್ಟು-ಮೆಲ್ಕಾರ್‌ನ ಸಂಪರ್ಕ ರಸ್ತೆಯಲ್ಲಿರುವ ದೇರಳಕಟ್ಟೆಯು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದೆ. ದೇರಳಕಟ್ಟೆಯ ಸುತ್ತಮುತ್ತ ಯೆನೆಪೊಯ, ನಿಟ್ಟೆ, ಫಾದರ್ ಮುಲ್ಲರ್, ಕಣಚೂರು ಆಸ್ಪತ್ರೆ-ಕಾಲೇಜುಳು, ಮದುವೆ- ಸಮಾರಂಭಗಳ ಹಾಲ್, ಶಾಲಾ-ಕಾಲೇಜುಗಳಲ್ಲದೆ 100ಕ್ಕೂ ಅಧಿಕ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳು ತಲೆ ಎತ್ತಿವೆ. ಪ್ರಮುಖ ಪಟ್ಟಣವಾಗಿರುವ ದೇರಳಕಟ್ಟೆಯಲ್ಲಿ ಹೊಸ ತಾಲೂಕಿನ ಕೇಂದ್ರ ಸ್ಥಾನ ತೆರೆದರೆ ಉಳ್ಳಾಲ, ತೊಕ್ಕೊಟ್ಟು ಮಾತ್ರವಲ್ಲದೆ ನರಿಂಗಾನ, ಬಾಳೆಪುಣಿ, ಕೈರಂಗಳ, ಕುರ್ನಾಡು, ಇರಾ ಮತ್ತಿತರ ಗ್ರಾಮದ ಜನರಿಗೂ ಅನುಕೂಲವಾಗಲಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ. ಉಳ್ಳಾಲ, ತಲಪಾಡಿ, ಸೋಮೇಶ್ವರ ಭಾಗದ ಜನರಿಗೆ ಎರಡೆರಡು ಬಸ್ ಮೂಲಕ ದೇರಳಕಟ್ಟೆಗೆ ತೆರಳುವ ಸಮಸ್ಯೆಯನ್ನು ಹೊರತುಪಡಿಸಿದರೆ ಬೇರೆ ಹೇಳಿಕೊಳ್ಳುವಂತಹ ಸಮಸ್ಯೆ ಯಾಗದು ಎಂಬುದು ಸಾರ್ವಜನಿಕರ ಅನಿಸಿಕೆ. ತೊಕ್ಕೊಟ್ಟಿನಲ್ಲಿ ಕೇಂದ್ರ ಸ್ಥಾನ ತೆರೆದರೆ ಅತ್ತ ಸಜಿಪನಡು, ಸಜಿಪ ಪಡು, ಇರಾ, ಬಾಳೆಪುಣಿ ಗ್ರಾಮಸ್ಥರಿಗೆ ಪ್ರಯಾಣ ಮಾರ್ಗ ದೂರ ಮಾತ್ರವಲ್ಲದೆ ಸಂಚಾರದ ಸಮಸ್ಯೆಯಾಗಬಹುದು ಎಂಬ ಮಾತು ಕೇಳಿ ಬರುತ್ತಿದೆ. ಈಗಾಗಲೆ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಜನರ ಮತ್ತು ವಾಹನಗಳ ಓಡಾಟ ಹೆಚ್ಚಿದೆ. ಇದರಿಂದ ಸಂಚಾರ ಸಮಸ್ಯೆಯೂ ಹೆಚ್ಚಾಗಿದೆ. ಹಾಗಾಗಿ ಹೊಸ ತಾಲೂಕಿನ ನಾಲ್ಕು ದಿಕ್ಕಿನಲ್ಲಿರುವವರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ದೇರಳಕಟ್ಟೆಯನ್ನು ಕೇಂದ್ರ ಸ್ಥಾನವನ್ನಾಗಿಸಲು ಪ್ರಯತ್ನ ನಡೆಯುತ್ತಿದೆ.

error: Content is protected !! Not allowed copy content from janadhvani.com