janadhvani

Kannada Online News Paper

ಸೌದಿ: ಮಾ.1ರಿಂದ ಭಾರತೀಯರ ಪಾಸ್ಪೋರ್ಟ್ ಸೇವೆ ಆನ್ ಲೈನ್ ನಲ್ಲಿ

ರಿಯಾದ್ : ಸೌದಿ ಅರೇಬಿಯಾದ ಭಾರತೀಯ ಪಾಸ್ಪೋರ್ಟ್ ಸೇವೆಗಳನ್ನು ಮಾರ್ಚ್ 1ರಿಂದ ಆನ್ ಲೈನ್ ನಲ್ಲಿ ನೀಡಲಾಗುತ್ತಿದ್ದು,ಹೊಸ ಪಾಸ್ಪೋರ್ಟ್ ಮತ್ತು ನವೀಕರಣೆಗಾಗಿ ಶುಕ್ರವಾರದಿಂದ ಅರ್ಜಿಗಳನ್ನು ಆನ್ ಲೈನ್ ಮೂಲಕ ಸ್ವೀಕರಿಸಲಾಗುವುದು ಎಂದು ರಿಯಾದ್ ನ ಭಾರತೀಯ ದೂತಾವಾಸ ಕೇಂದ್ರವು ತಿಳಿಸಿದೆ.

ವಿದೇಶೀ ವ್ಯವಹಾರಗಳ ಸಚಿವಾಲಯವು ಈಗಾಗಲೇ ವಿದೇಶಗಳಲ್ಲಿರುವ ತನ್ನ ದೂತಾವಾಸ ಕೇಂದ್ರದಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿತ್ತು. ಯೋಜನೆಯ ಮೊದಲ ಹಂತವಾಗಿ ಸೌದಿ ಅರೇಬಿಯಾದಲ್ಲಿ ಆನ್ ಲೈನ್ ಸೇವೆಯನ್ನು ಆರಂಭಿಸಲಾಗಿದೆ. ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಬಳಸಿಕೊಂಡು ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯು ಈ ಮೂಲಕ ಕೊನೆಗೊಂಡಿದೆ. ಸೌದಿಯಲ್ಲಿ ವಾಸಿಸುವವರು ವೆಬ್ ಸೈಟ್ ನಲ್ಲಿ ನೋಂದಾಯಿಸಲು https://embassy.passportindia.gov.in/ ಅನ್ನು ಬಳಸಬಹುದಾಗಿದ್ದು, ನೋಂದಣಿ ಬಳಿಕ ಬಳಕೆದಾರ ಖಾತೆ ಸಂಖ್ಯೆ ಮತ್ತು ಪಾಸ್ ವರ್ಡ್ ಗಳನ್ನು ಪಡೆದುಕೊಳ್ಳಬಹುದು.

ತುರ್ತು ಪ್ರಮಾಣಪತ್ರ, ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ, ಪಾಸ್ಪೋರ್ಟ್ ಸರೆಂಡರ್, ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಮುಂತಾದ ನಿರ್ದಿಷ್ಟ ಸೇವೆಗಳಿಗಾಗಿ ಆನ್ ಲೈನ್ ನಲ್ಲಿ ಅರ್ಜಿ ಫಾರ್ಮ್ ಅನ್ನು ಸಲ್ಲಿಸಬಹುದಾಗಿದೆ. ಆನ್ ಲೈನ್ ಅಪ್ಲಿಕೇಶನ್ ಭರ್ತಿಮಾಡಿ ಪ್ರಿಂಟ್ ತೆಗೆದು, ಫೋಟೋ ಲಗತ್ತಿಸಿದ ನಂತರ, ಸಂಬಂಧಿಸಿದ ಅಧಿಕಾರಿಯ ಮುಂದೆ ಹಾಜರಾಗಿ ಕಾಲಂಗೆ ಸಹಿ ಹಾಕಬೇಕಾಗುತ್ತದೆ.

ಹಣ ಪಾವತಿ ಮತ್ತು ಫೋಟೋ ಅಳವಡಿಕೆಯ ಸೌಕರ್ಯವನ್ನೂ ಸೇರ್ಪಡಿಸಿದ ಬಳಿಕ ಈ ಸೇವೆಯು ಸಂಪೂರ್ಣ ಆನ್ ಲೈನ್ ಆಗಲಿದೆ ಎಂದು ದೂತಾವಾಸವು ತಿಳಿಸಿದೆ.

error: Content is protected !! Not allowed copy content from janadhvani.com