janadhvani

Kannada Online News Paper

ಅಬುಧಾಬಿ:ಇಸ್ಲಾಮಿಕ್ ಶೃಂಗಸಭೆಯಲ್ಲಿ ಸುಷ್ಮಾ ಸ್ವರಾಜ್ ಗೌರವ ಅತಿಥಿ

ಅಬುಧಾಬಿ(ಫೆ.23): ಇಸ್ಲಾಮಿಕ್ ಸಹಕಾರ ಸಂಘಟನೆ ಆಯೋಜಿಸಿರುವ ವಿದೇಶಾಂಗ ಸಚಿವರ ಸಭೆಗೆ ಇದೇ ಮೊದಲ ಬಾರಿಗೆ, ಭಾರತದ ವಿದೇಶಾಂಗ ಸಚಿವರಿಗೆ ಗೌರವ ಅತಿಥಿಯಾಗಿ ಭಾಗವಹಿಸಲು ಆಹ್ವಾನ ನೀಡಿದೆ.

ಮಾ.1 ರಂದು ಅಬುಧಾಬಿಯಲ್ಲಿ ನಡೆಯಲಿರುವ ಒಐಸಿಯ 46 ನೇ ಶೃಂಗಸಭೆಯ ಉದ್ಘಾಟನಾ ಭಾಷಣ ಮಾಡುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಯುಎಇ ವಿದೇಶಾಂಗ ಸಚಿವ ಶೈಖ್ ಅಬ್ದುಲ್ಲಾಹ್ ಬಿನ್ ಝಾಯಿದ್ ಆಲ್ ನಹ್ಯಾನ್, ಸಮಾರಂಭದ ಉದ್ಘಾಟನಾ ಭಾಷಣ ಮಾಡುವಂತೆ ಭಾರತದ ವಿದೇಶಾಂಗ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಇನ್ನು ಒಐಸಿ ಮನವಿಯನ್ನು ವಿನಮ್ರತೆಯಿಂದ ಸ್ವೀಕರಿಸಿರುವ ಭಾರತದ ವಿದೇಶಾಂಗ ಇಲಾಖೆ, ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ-ಆಪರೇಷನ್ ನ ಆಹ್ವಾನವನ್ನು ಭಾರತದಲ್ಲಿರುವ 185 ಮಿಲಿಯನ್ ಮುಸ್ಲಿಮರ ಹಾಗೂ ಇಸ್ಲಾಮಿಕ್ ಜಗತ್ತಿಗೆ ಭಾರತದ ಕೊಡುಗೆಯ ಸ್ವಾಗತಾರ್ಹ ಗುರುತಿಸುವಿಕೆಯೆಂದು ಪರಿಗಣಿಸುವುದಾಗಿ ತಿಳಿಸಿದೆ.

1969 ರಲ್ಲಿ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ ಆಪರೇಷನ್ ಸಂಘಟನೆ ಆರಂಭವಾಗಿದ್ದು, 57 ಇಸ್ಲಾಮಿಕ್ ರಾಷ್ಟ್ರಗಳು ಇದರಲ್ಲಿ ಸದಸ್ಯತ್ವ ಪಡೆದಿವೆ.

error: Content is protected !! Not allowed copy content from janadhvani.com