janadhvani

Kannada Online News Paper

ಬೆಂಗಳೂರು ಏರೋ ಶೋ: ಭಾರೀ ಅಗ್ನಿ ಅನಾಹುತ-ನೂರಾರು ಕಾರುಗಳು ಬಸ್ಮ

ಬೆಂಗಳೂರು: ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ ತಾಲೀಮು ವೇಳೆ ಸೂರ್ಯ ಕಿರಣ್ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೈಲಟ್ ಮೃತಪಟ್ಟಿದ್ದ ಘಟನೆಯ ಬೆನ್ನಲ್ಲೇ ಶನಿವಾರ ಏರ್ ಶೋನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಇದರ ಪರಿಣಾಮ ಕೆಲಕಾಲ ಏರ್ ಶೋ ಸ್ಥಗಿತಗೊಳಿಸಿದ ಘಟನೆ ನಡೆದಿದೆ.

ಭಾರೀ ಅಗ್ನಿ ಅನಾಹುತದಲ್ಲಿ ಕಾರು, ಬೈಕ್ ಗಳು ಬೆಂಕಿಗಾಹುತಿಯಾಗಿದ್ದು, ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆ ಪಾರ್ಕಿಂಗ್ ಸ್ಥಳದಲ್ಲಿ ಆಕಸ್ಮಿಕ ಅಗ್ನಿ ಅನಾಹುತ ನಡೆದಿತ್ತು. ಈ ಘಟನೆಯಲ್ಲಿ ಎರಡು ಕಾರುಗಳು ಭಸ್ಮವಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಕೆಲವು ಮಾಧ್ಯಮಗಳ ವರದಿ ಪ್ರಕಾರ, 200ಕ್ಕೂ ಅಧಿಕ ಕಾರುಗಳು ಅಗ್ನಿಗಾಹುತಿಯಾಗಿದೆ ಎಂದು ತಿಳಿಸಿದೆ.

ಗೇಟ್ ನಂಬರ್ 5ರಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಿಂದಾಗಿ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಕಾರುಗಳು ಒಂದೊಂದಾಗಿಯೇ ಭಸ್ಮವಾಗತೊಡಗಿದ್ದವು. ಈ ಸಂದರ್ಭದಲ್ಲಿ ಸಿಲಿಂಡರ್ ಹೊಂದಿದ್ದ ಕಾರುಗಳ ಸ್ಫೋಟದಿಂದಾಗಿ 200ಕ್ಕೂ ಅಧಿಕ ಕಾರುಗಳು ಭಸ್ಮವಾಗಿದ್ದವು. ಈ ಶಬ್ದಕ್ಕೆ ಬೆಚ್ಚಿಬಿದ್ದ ಜನರು ದಿಕ್ಕಾಪಾಲಾಗಿ ಓಡತೊಡಗಿದ್ದಾರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ 10ಕ್ಕೂ ಅಧಿಕ ಅಗ್ನಿಶಾಮಕ ದಳದ ಸಿಬ್ಬಂದಿಗಳು ದೌಡಾಯಿಸಿದ್ದು, ಬೆಂಕಿಯನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಒಣಹುಲ್ಲಿಗೆ ಬೆಂಕಿ ತಗುಲಿ ಬೆಂಕಿ ಅನಾಹುತ ಸಂಭವಿಸಲು ಕಾರಣ ಎಂದು ತಿಳಿದು ಬಂದಿದೆ.

ಮೊದಲಿನ ಏರ್ ಶೋ 9-30ಕ್ಕೆ ಏರ್ ಶೋ ಆರಂಭಗೊಂಡಿತ್ತು. ವಾರದ ರಜಾ ದಿನವಾಗಿದ್ದರಿಂದ ಏರ್ ಶೋ ನೋಡಲು ಅಪಾರ ಪ್ರಮಾಣದಲ್ಲಿ ಜನರು ಸೇರಿದ್ದರು. ಅಗ್ನಿ ಅವಘಡದಿಂದಾಗಿ ಜನರು ಆತಂಕಕ್ಕೊಳಗಾಗಿದ್ದಾರೆನ್ನಲಾಗಿದೆ.

error: Content is protected !! Not allowed copy content from janadhvani.com