janadhvani

Kannada Online News Paper

6 ತಿಂಗಳಲ್ಲಿ ರಾಜ್ಯಾದ್ಯಂತ ವೈ-ಫೈ ಸಂಪರ್ಕ

ಬೆಂಗಳೂರು: ಮುಂದಿನ 6 ತಿಂಗಳಲ್ಲಿ ಇಡೀ ಕರ್ನಾಟಕಕ್ಕೆ ವೈ-ಫೈ ಸಂಪರ್ಕ ನೀಡಲಾಗುವುದು ಎಂದು ಕೇಂದ್ರ ಕಲ್ಲಿದ್ದಲು ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿಂದು ಕೇಂದ್ರ ಕಲ್ಲಿದ್ದಲು ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರನ್ನು ಭೇಟಿಯಾಗಿ ರಾಜ್ಯದ ಕಲ್ಲಿದ್ದಲು ಪೂರೈಕೆ ಹಾಗೂ ಉಪನಗರ ರೈಲು ಯೋಜನೆ ಕುರಿತು ಚರ್ಚಿಸಿದರು.

ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಿಯೂಷ್ ಗೋಯೆಲ್, ಎಲ್ಲಾ ಸಬ್ಅರ್ಬನ್ ರೈಲ್ವೇ ನಿಲ್ದಾಣಗಳಿಗೂ ವೈಫೈ ಸೌಲಭ್ಯ ನೀಡುವ ಭರವಸೆ ನೀಡಿದರು. ಉಪನಗರ ರೈಲು ಯೋಜನೆಯ ಬಗ್ಗೆ ರಾಜ್ಯ ಸರ್ಕಾರ ಭೂಮಿ ತೆರವು ಬಗ್ಗೆ ಚಿಂತಿಸಿ, ಕೆಲಸ ಮಾಡಲಿದೆ. ರೈಲ್ವೇ ಇತಿಹಾಸದಲ್ಲೇ ಇಷ್ಟು ವೇಗವಾಗಿ ಯಾವುದೂ ಈ ರೀತಿ‌ ಕೆಲಸ ಆಗಿಲ್ಲ. 23,000 ಕೋಟಿ ರೂ. ಯೋಜನೆಯಲ್ಲಿ 160 ಕಿ.ಮೀ. ದೂರ ಈ ಕೆಲಸ ನಡೆಯಲಿದೆ. ಮೆಟ್ರೋ, ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣಗಳಿಗೆ ಇದರಿಂದ ಸಂಪರ್ಕ ಸಿಗಲಿದೆ. 80 ನಿಲ್ದಾಣಗಳಿಗೆ ಸಬ್ ಅರ್ಬನ್ ಯೋಜನೆಯಿಂದ ಸಂಪರ್ಕ ಸಿಗಲಿದೆ ಎಂದು ಮಾಹಿತಿ ನೀಡಿದರು.

ಬೆಂಗಳೂರು ಸಬ್ಅರ್ಬನ್ ರೈಲು ಅನಂತಕುಮಾರ್ ಅವರ ಕನಸಾಗಿತ್ತು. ಆ ಕನಸನ್ನು ನನಸು ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ದಿವಂಗತ ಅನಂತ್ಕುಮಾರ್ ಅವರನ್ನು ನೆನೆದು ಸಚಿವ ಪಿಯೂಷ್ ಗೋಯೆಲ್ ಭಾವುಕರಾದರು.

error: Content is protected !! Not allowed copy content from janadhvani.com