ದೇವೇಗೌಡರ ಕುಟುಂಬ ಮಣ್ಣಿನ ಮಕ್ಕಳಾದರೆ ನಾವೆಲ್ಲ ಯಾರು? – ಸಿದ್ಧರಾಮಯ್ಯ

ಒಬ್ಬರು ಮಣ್ಣಿನ ಮಗ ಅಂತಾರೆ, ಮತ್ತೊಬ್ಬರು ಪ್ರಾಮಾಣಿಕ ಮಣ್ಣಿನ ಮಗ ಅಂತಾರೆ. ಹಾಗಾದರೆ ನೀವು-ನಾವೆಲ್ಲ ಯಾರು..? ನಾವೇ ನಿಜವಾದ ಮಣ್ಣಿನ ಮಕ್ಕಳು ಎಂದು ಇಂದಿಲ್ಲಿ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿಯವರಿಗೆ ಟಾಂಗ್ ನೀಡಿದ್ದಾರೆ. ಬಾಗೇಪಲ್ಲಿಯಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಮತ್ತು ಶಂಕುಸ್ಥಾಪನೆ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಣ್ಣಿನ ಮಗ ಪದವಿಗೆ ಪೈಪೋಟಿ ನಡೆಯುತ್ತಿದೆ. ನಾನು ಕೂಡ ಮಣ್ಣಿನ ಮಗನೇ. ನಾವು-ನೀವು ಎಲ್ಲ ಮಣ್ಣಿನ ಮಕ್ಕಳೇ ಎಂದು ಅವರು ಹೇಳಿದರು.

ಮಣ್ಣಿನ ಮಗ ಟೈಟಲ್‍ಗಾಗಿ ಬಿ.ಎಸ್.ಯಡಿಯೂರಪ್ಪ, ಕುಮಾರಸ್ವಾಮಿ ಪೈಪೋಟಿಗೆ ಬಿದ್ದಿದ್ದಾರೆ. ನಿಜವಾದ ಮಣ್ಣಿನ ಮಗ ನಾನೇ ಎಂದು ಹೇಳಿದರು. ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ನಾವು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ನಮ್ಮ ತಂದೆ-ತಾಯಿ ಕುರುಬರಾಗಿದ್ದಾರೆ. ಹಾಗಾಗಿ ಅವರ ಹೊಟ್ಟೆಯಲ್ಲಿ ಹುಟ್ಟಿ ನಾನು ಕುರುಬನಾಗಿದ್ದೇನೆ. ದೇಶದಲ್ಲಿ ಮೊದಲಿನಿಂದಲೂ ಜಾತಿ ಇದೆ. ಜಾತಿ ಹಣೆಪಟ್ಟಿ ಕಟ್ಟಿಕೊಳ್ಳುವುದು ಸರಿಯಲ್ಲ. ಕುವೆಂಪು ಅವರ ಆಶಯದಂತೆ ನಾವೆಲ್ಲರೂ ವಿಶ್ವ ಮಾನವರಾಗೋಣ ಎಂದು ಹೇಳಿದ ಅವರು ಜಾತಿ ವ್ಯವಸ್ಥೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ದೇಶದಲ್ಲಿ ಮೊದಲಿನಿಂದಲೂ ಜಾತಿ-ಧರ್ಮಗಳು ಬಂದಿವೆ. ವಿಶ್ವಮಾನವ ಸಂದೇಶ ನಮಗೆ ಅಗತ್ಯವಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!