janadhvani

Kannada Online News Paper

ಕಾಶ್ಮೀರದ ಮಣ್ಣು ಮಾತ್ರವಲ್ಲ ಜನತೆ ಕೂಡ ಭಾರತದ ಪರವಾಗಿರಬೇಕು- ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್

ದುಬೈ:ಜನರ ಜೀವ ಮತ್ತು ಸಂಪತ್ತಿಗೆ ನಾಶ,ನಷ್ಟವನ್ನುಂಟುಮಾಡುವ ವಿಧ್ವಂಸಕ ಕೃತ್ಯಗಳಿಗೆ ಕಡಿವಾನ ಹಾಕುವ ನಿಟ್ಟಿನಲ್ಲಿಈ ಸರ್ಕಾರಗಳು ಕ್ರಮ ಕೈಗೊಳ್ಳುವಾಗ ಜನರ ವಿಶ್ವಾಸ, ಅವರ ಹಿತಾಸಕ್ತಿಯನ್ನು ಪರಿಗಣೆಸಬೇಕಿದೆ ಎಂದು ಅಖಿಲ ಭಾರತ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಬಾಗ್ದಾದ್ ಅಂತಾರಾಷ್ಟ್ರೀಯ ಖುರ್‌ಆನ್ ಸಮ್ಮೇಳನದಲ್ಲಿ ಎ.ಪಿ.ಉಸ್ತಾದ್
ಬಾಗ್ದಾದ್‌ನಲ್ಲಿ ನಡೆದ ಅಂತರ್‌ರಾಷ್ಟ್ರೀಯ ಖುರ್‌ಆನ್ ಸಮ್ಮೇಳನದಲ್ಲಿ ಭಾಗವಹಿಸಿದ ನಂತರ, ಅವರು ದುಬೈನಲ್ಲಿ ಈ ಹೇಳಿಕೆ ನೀಡಿದ್ದಾರೆ.

ಪುಲ್ವಾಮಾ ಘಟನೆಯ ನಂತರ ದೇಶದ ವಿವಿಧ ಭಾಗಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿಗಳು ಮತ್ತಿತರರ ಮೇಲೆ ದಾಳಿ ನಡೆಯಬಾರದಿತ್ತು. ನಮಗೆ ಕಾಶ್ಮೀರದ ಮಣ್ಣು ಮಾತ್ರವಲ್ಲ. ಕಾಶ್ಮೀರಿಗಳ ಮನಸ್ಸುಗಳೂ ಬೇಕಾಗಿದೆ. ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಯುವಕರಲ್ಲಿ ಬೆಳೆಯುತ್ತಿರುವ ಅಸಾಮಾಧಾನವನ್ನು ತಿಳಿಯಲು ಮತ್ತು ಅದಕ್ಕೆ ಪರಿಹಾರವನ್ನು ಒದಗಿಸಲು ಸರಕಾರಗಳು ಕ್ರಮ ಕೈಗೊಳ್ಳಬೇಕಿದೆ. ಅವರಲ್ಲಿ ಭಾರತ ವಿರೋಧಿ ಮನೋಭಾವ ಉಂಟುಮಾಡುವ ಕಾರಣಗಳೇನೆಂದು ಅರಿತು ಆ ಮನೋಭಾವವನ್ನು ಹೋಗಲಾಡಿಸುವ ವಾತಾವರಣ ನಿರ್ಮಿಸಬೇಕು.

ಭಾರತದ ಇತರಕಡೆ ಇರುವಂತೆ ಕಾಶ್ಮೀರದಲ್ಲೂ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಶಿಕ್ಷಣದಲ್ಲೂ ಈ ಹಿನ್ನೆಡೆ ಇದೆ. ಇದನ್ನು ಮನಗಂಡು ತನ್ನ ನಾಯಕತ್ವದಲ್ಲಿರುವ ಕಲ್ಲಿಕೋಟೆಯ ಕಾರಂದೂರ್ ಮರ್ಕಝ್‌ನಲ್ಲಿ ಕಾಶ್ಮೀರದಿಂದ ನೂರಾರು ವಿದ್ಯಾರ್ಥಿಗಳನ್ನು ಕರೆತಂದು ಅವರಿಗೆ ಅಧ್ಯಯನ ನೀಡಿ ಅವರಲ್ಲಿ ದೇಶಪ್ರೇಮವನ್ನು ಬೆಳೆಸುವ ಪ್ರಯತ್ನ ಮಾಡಲಾಗಿದೆ.

ಕಾಶ್ಮೀರವು ಭಾರತದ ಭಾಗವಾಗಿದೆ. ನಮಗೆ ಕಾಶ್ಮೀರದ ಭೂಮಿ ಮಾತ್ರವಲ್ಲ. ವೈವಿಧ್ಯತೆಯ ವೃಂದಾವನವಾದ ಕಾಶ್ಮೀರದ ಜನತೆ ಕೂಡ ಭಾರತದ ಪರವಾಗಿರಬೇಕು. ತಾವೂ ಕೂಡ ಭಾರತೀಯರೇ ಎನ್ನುವ ಭಾವನೆ ಅವರಲ್ಲಿ ಮೂಡುವಂತಹ ಕೆಲಸವನ್ನು ಅಧಿಕಾರಿಗಳು ಸೃಷ್ಟಿಸಬೇಕು. ಬಂದೂಕುಗಳು ಅಥವಾ ಬಾಂಬ್ ಮೂಲಕ ಅದು ಸಾಧ್ಯವಿಲ್ಲ ಎಂಬುದನ್ನು ತಿಳಿಯಬೇಕು ಎಂದು ಕಾಂತಪುರಂ ಹೇಳಿದರು.

ಕಾಶ್ಮೀರಿಗಳನ್ನು ಭಾರತಪರವಾಗಿಸುವ ಕಾರ್ಯವಿಧಾನ ಯೋಜನೆ ರೂಪಿಸುವಲ್ಲಿ ಅಗತ್ಯವಿದ್ದರೆ, ಸುನ್ನಿ ಜಂಇಯತುಲ್ ಉಲಮಾ ನಾಯಕತ್ವ ಬೆಂಬಲ ನೀಡಲಿದೆ ಎಂದು ಎ.ಪಿ. ಉಸ್ತಾದ್ ಹೇಳಿದರು.

error: Content is protected !! Not allowed copy content from janadhvani.com