janadhvani

Kannada Online News Paper

ಪಾಸ್ಪೋರ್ಟ್‌ಗೆ ಇಖಾಮಾ ಸ್ಟಿಕ್ಕರ್ ಲಗತ್ತಿಸುವ ವಿಧಾನಕ್ಕೆ ಬ್ರೇಕ್

ಕುವೈತ್ ಸಿಟಿ: ಕುವೈಟ್‌ಗೆ ಆಗಮಿಸುವ ವಿದೇಶಿಯರ ಪಾಸ್ಪೋರ್ಟ್‌ಗೆ ಇಖಾಮಾ ಸ್ಟಿಕರ್ ಲಗತ್ತಿಸುವುದನ್ನು ಕೈಬಿಡಲಾಗುವುದು. ರೆಸಿಡೆನ್ಸಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಸಿವಿಲ್ ಐಡಿ ಕಾರ್ಡ್ ನಲ್ಲಿ  ಒಳಪಡಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.

ಹೊಸ ವ್ಯವಸ್ಥೆಯು ಪಾಸ್ಪೋರ್ಟ್ ನಷ್ಟ ಮತ್ತು ತಡೆಹಿಡಿಯುವ ಮೂಲಕ ಉಂಟಾಗುವ ತೊಂದರೆಗಳನ್ನು ನಿಭಾಯಿಸಲಿದೆ.ಇದು ಗೃಹ ಸಚಿವಾಲಯದ ವಿವಿಧ ಇಲಾಖೆಗಳ ಕಾರ್ಯವನ್ನು ಸಂಪೂರ್ಣವಾಗಿ ಯಾಂತ್ರೀಕೃತ ರೂಪಕ್ಕೆ ತರುವ ಕಾರ್ಯವಿಧಾನದ ಒಂದು ಭಾಗವಾಗಿದೆ.

ಈ ಕುರಿತು ಉಪ ಪ್ರಧಾನಿ ಮತ್ತು ಸಚಿವ ಲೆಫ್ಟಿನೆಂಟ್ ಜನರಲ್ ಶೈಖ್ ಖಾಲಿದ್ ಅಲ್ ಜರಾಹ್  ಅಲ್ ಸಬಾ ಸಂಬಂಧಿಸಿದ ವಿಭಾಗಗಳಿಗೆ ಸೂಚನೆ ನೀಡಿದ್ದಾರೆ ಎಂದು ವಸತಿ ವಿಭಾಗದ ಅಂಡರ್ ಸೆಕ್ರೆಟರಿ ಮೇಜರ್ ಜನರಲ್ ತಲಾಲ್ ಅಲ್ ಮರಾಫಿ ಹೇಳಿದರು.

ಪ್ರಸ್ತುತ, ಪಾಸ್‌ಪೋರ್ಟ್‌ನಲ್ಲಿ ಸ್ಟಿಕರ್ ರೂಪದಲ್ಲಿ ಇಖಾಮಾ ಪುಟವನ್ನು ಅಂಟಿಸಲಾಗುತ್ತಿದ್ದು, ನವೀಕರಣಗೊಳ್ಳುವ ವೇಳೆ ಪ್ರತಿ ಬಾರಿಯೂ ಪಾಸ್ ಪೋರ್ಟ್ ನಲ್ಲಿ ಹೊಸ ಪುಟವನ್ನು ಸ್ಟಿಕರ್ ಅಂಟಿಸಲು ಬಳಸಲಾಗುತ್ತಿದೆ.

ಹೊಸ ವ್ಯವಸ್ಥೆಯನ್ನು ಪ್ರಚಾರಪಡಿಸಲು ಅಧಿಕಾರಿಗಳು ವ್ಯಾಪಕ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ವಿದೇಶಿ ನೌಕರರ ಪಾಸ್ಪೋರ್ಟ್ ತಡೆಹಿಡಿಯುವುದನ್ನು ತಪ್ಪಿಸಲು ಹೊಸ ಕ್ರಮ ಸಹಾಯವಾಗಲಿದೆ ಎಂದ ಅವರು, ಸ್ಟಿಕರ್ ಅಂಟಿಸುವ ವಿಧಾನವನ್ನು ತೆಗೆದುಹಾಕುವ ಮೂಲಕ ಪೇಪರ್ ಬಳಕೆಯನ್ನು ಕಡಿತಗೊಳಿಸುವುದು ಮತ್ತೊಂದು ಪ್ರಯೋಜನವಾಗಿದೆ ಎಂದರು.

error: Content is protected !! Not allowed copy content from janadhvani.com