janadhvani

Kannada Online News Paper

ನ್ಯಾಯಾಂಗ ನಿಂದನೆ: ರಿಲಾಯನ್ಸ್ ಮುಖ್ಯಸ್ಥ ಅನಿಲ್ ಅಂಬಾನಿಗೆ ಜೈಲು?

ನವದೆಹಲಿ, ಫೆ.20- ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ದೇಶದ ಪ್ರತಿಷ್ಠಿತ ರಿಲಾಯನ್ಸ್ ಕಮ್ಯುನಿಕೇಷನ್ ಮುಖ್ಯಸ್ಥ ಅನಿಲ್ ಅಂಬಾನಿಯನ್ನು ಅಪರಾಧಿ ಎಂದು ಘೋಷಿಸಿರುವ ಸುಪ್ರೀಂಕೊರ್ಟ್ ನಾಲ್ಕು ವಾರದೊಳಗೆ ಎರಿಕ್ಸನ್ ಸಂಸ್ಥೆಗೆ 550 ಕೋಟಿ ಹಣ ಪಾವತಿಸದಿದ್ದರೆ ಜೈಲಿಗಟ್ಟುವುದಾಗಿ ಎಚ್ಚರಿಸಿದೆ.

ನಮ್ಮಿಂದ ತಪ್ಪಾಗಿದೆ, ಕ್ಷಮಿಸಿಬಿಡಿ ಎಂದು ರಿಲಾಯನ್ಸ್ ಕಂಪೆನಿಯವರು ಪರಿಪರಿಯಾಗಿ ಬೇಡಿಕೊಂಡರೂ ಒಪ್ಪದ ನ್ಯಾಯಾಲಯ, ನಾಲ್ಕು ವಾರದೊಳಗೆ ಎರಿಕ್ಸನ್ ಸಂಸ್ಥೆಗೆ ನೀಡಬೇಕಿರುವ 550 ಕೋಟಿ ಹಣವನ್ನು ಹಿಂದಿರುಗಿಸದಿದ್ದರೆ ಜೈಲಿಗೆ ಹಾಕುತ್ತೇವೆ ಎಂದು ಗುಡುಗಿತು.

ನ್ಯಾಯಾಲಯದ ಆದೇಶ ಗೌರವಿಸುವುದಿಲ್ಲ ಎಂದರೆ ನಿಮ್ಮನ್ನು ಏಕೆ ಜೈಲಿಗೆ ಹಾಕಬಾರದು. ಎರಿಕ್ಸನ್ ಸಂಸ್ಥೆಗೆ 453 ಕೋಟಿ ಹಣದ ಜತೆಗೆ ಹೆಚ್ಚುವರಿಯಾಗಿ 118 ಕೋಟಿ ಹಣವನ್ನು ತಕ್ಷಣವೇ ನೀಡದಿದ್ದರೆ ಜೈಲುಶಿಕ್ಷೆ ಅನುಭವಿಸಲು ಸಿದ್ಧರಾಗಬೇಕು ಎಂದು ರಿಲಾಯನ್ಸ್ ಕಂಪೆನಿ ಪರ ವಕೀಲರಿಗೆ ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದರು.

ನೀವು ಷರತ್ತುಬದ್ಧ ಕ್ಷಮಾಪಣೆ ಕೇಳಿದ ತಕ್ಷಣ ಕ್ಷಮಿಸಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪಿಗೆ ಬದ್ಧರಾಗಿರುವುದು ನಿಮ್ಮ ಕರ್ತವ್ಯ. ನಿಮಗೆ ಎಷ್ಟು ಬಾರಿ ಪೀಠದಲ್ಲಿ ಕುಳಿತು ಆದೇಶ ಮಾಡಬೇಕೆಂದು ರಿಲಾಯನ್ಸ್ ಕಂಪೆನಿ ಅಧ್ಯಕ್ಷ ಅನಿಲ್ ಅಂಬಾನಿಯನ್ನು ತರಾಟೆಗೆ ತೆಗೆದುಕೊಂಡರು.

ಎರಿಕ್ಸನ್ ಸಂಸ್ಥೆಯಿಂದ ರಿಲಾಯನ್ಸ್ ಕಮ್ಯುನಿಕೇಷನ್ ಸಂಸ್ಥೆಯವರು ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿ ಮಾಡಿದ್ದರು. ವ್ಯವಹಾರಕ್ಕೆ ಸಂಬಂಧಿಸಿದಂತೆ ತನಗೆ ನೀಡಬೇಕಿರುವ ಪಾವತಿ ಹಣವನ್ನು ನೀಡಬೇಕೆಂದು ಕಂಪೆನಿ ಅನಿಲ್ ಅಂಬಾನಿಗೆ ಮನವಿ ಮಾಡಿಕೊಂಡಿತು.

ಆದರೆ, ಅನಿಲ್ ಅಂಬಾನಿ 453 ಕೋಟಿ ಹಣವನ್ನು ನೀಡದೆ ಸತಾಯಿಸಿದ್ದರು. ಬಾಕಿ ಹಣದ ಜತೆಗೆ ಬಡ್ಡಿ ಮೊತ್ತ ಸೇರಿಸಿ ಒಟ್ಟು 550 ಕೋಟಿ ಹಣ ನೀಡಬೇಕೆಂದು ರಿಲಾಯನ್ಸ್ ಕಮ್ಯುನಿಕೇಷನ್ ಸಂಸ್ಥೆ ವಿರುದ್ಧ ಎರಿಕ್ಸನ್ ಸುಪ್ರೀಂಕೊರ್ಟ್‍ನಲ್ಲಿ ದಾವೆ ಹೂಡಿತ್ತು.

ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ವಿನುತ್ ಸರಣ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಫೆ.13ರಂದು ಸುದೀರ್ಘ ವಿಚಾರಣೆ ನಡೆಸಿ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.

ಸ್ವೀಡನ್ ಮೂಲದ ಎರಿಕ್ಸನ್ ಕಂಪೆನಿಯಿಂದ ರಿಲಾಯನ್ಸ್ ಕಮ್ಯುನಿಕೇಷನ್ ಈ ಹಿಂದೆ ವಿದ್ಯುನ್ಮಾನ ಉಪಕರಣಗಳನ್ನು ಖರೀದಿ ಮಾಡಿಕೊಂಡಿತ್ತು. ಒಪ್ಪಂದದ ಪ್ರಕಾರ, ಬಾಕಿ ನೀಡಬೇಕಾಗಿದ್ದ 453 ಕೋಟಿ ಹಣ ನೀಡದೆ ಸತಾಯಿಸಲಾಗಿತ್ತು.

ಈ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಾಯನ್ಸ್ ಕಮ್ಯುನಿಕೇಷನ್ ಮುಖ್ಯಸ್ಥರಾಗಿರುವ ಆನಿಲ್ ಅಂಬಾನಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತ್ತು. ಸುಪ್ರೀಂಕೋರ್ಟ್‍ನ ರಿಜಿಸ್ಟ್ರಿಯಲ್ಲಿ 118 ಕೋಟಿ ಡಿಡಿ ಮೂಲಕ ಪಾವತಿಸುವಂತೆ ರಿಲಾಯನ್ಸ್ ಕಮ್ಯುನಿಕೇಷನ್‍ಗೆ ಅನುಮತಿ ನೀಡಲಾಗಿತ್ತು.
ಅಲ್ಲದೆ, ರಿಲಾಯನ್ಸ್ ಜಿಯೋ ಮತ್ತು ರಿಲಾಯನ್ಸ್ ಕಮ್ಯುನಿಕೇಷನ್ ನಡುವಿನ ವ್ಯಾಜ್ಯ, ಬಾಕಿಮೊತ್ತವನ್ನು ಬಗೆಹರಿಸಿಕೊಳ್ಳುವಂತೆ ಸೂಚಿಸಿತ್ತು.

ಸ್ಪ್ರೆಕ್ಟ್ರಮ್ ಮಾರಾಟ ವಿಳಂಬವಾದ ಹಿನ್ನೆಲೆಯಲ್ಲಿ ರಿಲಾಯನ್ಸ್ ಸಂಸ್ಥೆಯು ಎರಿಕ್ಸನ್ ಸಂಸ್ಥೆಗೆ 550 ಕೋಟಿ ರೂ. ಪಾವತಿ ಮಾಡಲು ಸಾಧ್ಯವಿಲ್ಲ ಎಂದು ದೂರ ಸಂಪರ್ಕ ಇಲಾಖೆ ವಿರುದ್ಧ ಸುಪ್ರೀಂಕೋರ್ಟ್‍ನಲ್ಲಿ ದಾವೆ ಹೂಡಿತ್ತು.

ಸುಪ್ರೀಂಕೋರ್ಟ್‍ನಲ್ಲಿ 550 ಕೋಟಿ ರೂ.ಗಳ ವೈಯಕ್ತಿಕ ಖಾತ್ರಿ ನೀಡಿದ್ದ ಅನಿಲ್ ಅಂಬಾನಿ ವಿರುದ್ಧ ಎರಿಕ್ಸನ್ ಸಂಸ್ಥೆಯು ಅರ್ಜಿ ಹಾಕಿತ್ತು. ಬಾಕಿ ಮೊತ್ತವನ್ನು ಪಾವತಿಸುವ ತನಕ ಅನಿಲ್ ಅಂಬಾನಿ ದೇಶ ಬಿಟ್ಟು ವಿದೇಶಕ್ಕೆ ಹೋಗದಂತೆ ನ್ಯಾಯಾಲಯ ಆದೇಶಿಸಬೇಕೆಂದು ಮನವಿ ಮಾಡಿಕೊಂಡಿತ್ತು.

ಬಾಕಿ ಮೊತ್ತವನ್ನು ಸೆ.30, ಡಿ.15ರೊಳಗೆ ಎರಡು ಗಡುವಿನೊಳಗೆ ಪಾವತಿಸಲು ಆದೇಶ ನೀಡಬೇಕು. ಇಲ್ಲವೆ ಅವರನ್ನು ಜೈಲಿಗೆ ಹಾಕಬೇಕು ಎಂದು ಎರಿಕ್ಸನ್ ಸಂಸ್ಥೆ ಪರ ವಕೀಲರು ಮನವಿ ಮಾಡಿಕೊಂಡಿದ್ದರು.

ಇತ್ತೀಚೆಗಷ್ಟೆ ಅನಿಲ್ ಅಂಬಾನಿ ಕಂಪೆನಿ ಪರವಾಗಿ ಸುಪ್ರೀಂಕೋರ್ಟ್ ತೀರ್ಪನ್ನೇ ತಿದ್ದುಪಡಿ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‍ನ ಇಬ್ಬರು ಅಧಿಕಾರಿಗಳನ್ನು ಅಮಾನತುಪಡಿಸಲಾಗಿತ್ತು.

error: Content is protected !! Not allowed copy content from janadhvani.com