ಮಹದಾಯಿ ವಿವಾದ: ಜ.25ರಂದು ಕರ್ನಾಟಕ ಬಂದ್‌

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆವಹಿಸಿ ಮಹದಾಯಿ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸುವಂತೆ ಆಗ್ರಹಿಸಿ, ಜ.25ರಂದು ಕರ್ನಾಟಕ ಬಂದ್‌ ನಡೆಸುವುದಾಗಿ ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಹೇಳಿದರು.

ಈ ವಿಷಯವಾಗಿ, ಫೆ.3ರೊಳಗೆ ಪ್ರಧಾನಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು. ಇಲ್ಲವಾದರೆ ಫೆ.4ರಂದು ಬೆಂಗಳೂರು ಬಂದ್‌ ನಡೆಸುವ ಮೂಲಕ ಅವರಿಗೆ ಹೋರಾಟದ ಬಿಸಿ ಮುಟ್ಟಿಸಲಾಗುವುದು ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಂಗಳೂರಿಗೆ ಬರಲಿರುವ ಪ್ರಧಾನಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಲಾಗುವುದು. ಅಲ್ಲದೇ ಅವರು ರಾಜ್ಯದ ಯಾವುದೇ ಭಾಗಕ್ಕೆ ಭೇಟಿ ನೀಡಿದರೂ ಅಲ್ಲಿ ಹೋರಾಟಗಾರರು ಕಪ್ಪು ಬಾವುಟ ಪ್ರದರ್ಶಿಸಲಿದ್ದಾರೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಗೆ ಅಡ್ಡಿ: ವಾಟಾಳ್‌ ಅವರು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಸಭಾಂಗಣಕ್ಕೆ ಬಂದ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಮುಖಂಡರು, ‘ಮಹದಾಯಿ ವಿಷಯವಾಗಿ ಪದೇ ಪದೇ ಬಂದ್‌ ನಡೆಸುತ್ತಿರುವುದರಿಂದ ಇಲ್ಲಿನ ವ್ಯಾಪಾರ, ವಹಿವಾಟಿಗೆ ತೊಂದರೆಯಾಗುತ್ತಿದೆ. ಇದರ ಬದಲು, ಗೋವಾ ರಾಜ್ಯಕ್ಕೆ ಹಾಗೂ ಪ್ರಧಾನಿಗೆ ಬಿಸಿ ಮುಟ್ಟಿಸುವ ಹೋರಾಟ ರೂಪಿಸಬೇಕು’ ಎಂದು ಆಗ್ರಹಿಸಿದರು.

‘ಜ.25ರ ಬದಲು ಫೆ 4ರಂದು ಕರ್ನಾಟಕ ಬಂದ್‌ಗೆ ಕರೆ ನೀಡಬೇಕು’ ಎಂದು ಸಮನ್ವಯ ಸಮಿತಿ ಗೌರವ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಅಧ್ಯಕ್ಷ ಲೋಕನಾಥ ಹೆಬಸೂರ, ಸಂಚಾಲಕರಾದ ಅಮೃತ ಇಜಾರಿ, ಮಹೇಶ ಪತ್ತಾರ, ವಿಕಾಸ ಸೊಪ್ಪಿನ, ಕುಮಾರಸ್ವಾಮಿ ಹಿರೇಮಠ ಒತ್ತಾಯಿಸಿದರು. ಇದರಿಂದ ಪತ್ರಿಕಾಗೋಷ್ಠಿಯಲ್ಲಿ ಕೆಲ ಹೊತ್ತು ಗದ್ದಲ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬಳಿಕ ಸಮನ್ವಯ ಸಮಿತಿಯ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ವಾಟಾಳ್‌, ‘ಈಗಾಗಲೇ ಜ.25ರಂದು ಕರ್ನಾಟಕ ಬಂದ್‌ ನಡೆಸಲು ಸಿದ್ಧತೆ ಮಾಡಿಕೊಂಡಿರುವುದರಿಂದ ಅಂದಿನ ಬಂದ್‌ ಅನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸೋಣ, ಫೆ.4ರಂದು ಪ್ರಧಾನಿ ಬೆಂಗಳೂರಿಗೆ ಬರುತ್ತಿರುವುದರಿಂದ ಅಂದು ಬೆಂಗಳೂರು ಬಂದ್‌ ಮಾಡೋಣ’ ಎಂದು ಹೇಳಿದರು.

ಇದಕ್ಕೆ ಸಮ್ಮತಿಸಿದ ಮಹದಾಯಿ ಹೋರಾಟಗಾರರು, ‘ಬೆಂಗಳೂರು ಬಂದ್‌ ನಡೆಸುವ ಮೂಲಕ ಪ್ರಧಾನಿಗೆ ಅಂದು ಒಂದು ಹನಿ ನೀರು ಸಿಗದಂತೆ ಮಾಡೋಣ. ಉತ್ತರ ಕರ್ನಾಟಕ ಭಾಗದ ಸಾವಿರಾರು ರೈತರು, ಹೋರಾಟಗಾರರು ಬೆಂಗಳೂರು ಬಂದ್‌ನಲ್ಲಿ ಭಾಗವಹಿಸುತ್ತೇವೆ’ ಎಂದು ಹೇಳಿದರು.

ಬಂದ್ ಗೆ ಸಿಎಂ ಕುಮ್ಮಕ್ಕು:ಯಡಿಯೂರಪ್ಪ ಟೀಕೆ 

ಮೈಸೂರು: ಬಿಜೆಪಿ ಈ ತಿಂಗಳ 25 ರಂದು ಮೈಸೂರಿನಲ್ಲಿ ನಡೆಸಲಿರುವ ಪರಿವರ್ತನಾ ಯಾತ್ರೆಗೆ ಅ‌ಡ್ಡಿಪಡಿಸಲೆಂದೇ ವಿವಿಧ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಮ್ಮಕ್ಕು ಇದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ನೇರವಾಗಿ ಆರೋಪಿಸಿದರು.
ಪರಿವರ್ತನಾ ಯಾತ್ರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಆಗಮಿಸಲಿದ್ದು, ಈ ಯಾತ್ರೆಯನ್ನು ವಿಫಲಗೊಳಿಸಲು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಸಿದ್ದರಾಮಯ್ಯ ಸ್ವಯಂ ಪ್ರೇರಿತವಾಗಿ ನಡೆಸುತ್ತಿರುವ ಬಂದ್ ಇದಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಟೀಕಿಸಿದರು.ಮೈಸೂರಿನಲ್ಲಿ ನಡೆಸಲು ಉದ್ದೇಶಿಸಿರುವ ಪರಿವರ್ತನಾ ಯಾತ್ರೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ನಡೆಸೇ ನಡೆಸುತ್ತೇವೆ, ನಮ್ಮ ಹೋರಾಟ ಕಾಂಗ್ರೆಸ್ ವಿರುದ್ಧವಾಗಿದೆ ಎಂದು ಅವರು ಹೇಳಿದರು.

ಮಹದಾಯಿ ವಿವಾದಕ್ಕೂ, ಮೈಸೂರು ಭಾಗಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದ ಅವರು, ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ. ಉತ್ತರ ಕರ್ನಾಟಕ ಭಾಗದ ಜನರಿಗೆ ಕುಡಿಯುವ ನೀರಿಗಾಗಿ ಮಹದಾಯಿ ನದಿ ನೀರನ್ನು ಕೊಡುತ್ತೇವೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಅಲ್ಲಿನ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಈ ಧೋರಣೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ಏಕೆ ಮಾಡಿಲ್ಲ ಎಂದು ಅವರು ಪ್ರಶ್ನಿಸಿದರು.
ಮಹದಾಯಿ ವಿವಾದ ಬಗೆಹರಿಯುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಅದು ಜೀವಂತವಾಗಿರಬೇಕೆಂಬುದು ಆ ಪಕ್ಷದ ನಿಲುವಾಗಿದೆ. ಮಹದಾಯಿ ವಿವಾದ ಸಂಬಂಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!