ಎಲ್ಲಾ ರೈಲು ಹಾಗೂ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

ಹೊಸದಿಲ್ಲಿ: ಎಲ್ಲಾ ರೈಲು ಹಾಗೂ ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ 2018-19ರ ಬಜೆಟ್‌ನಲ್ಲಿ ಸುಮಾರು 3 ಸಾವಿರ ಕೋಟಿ ರೂ. ಮೀಸಲಿಡಲಿದೆ.

ಸದ್ಯಕ್ಕೆ ದೇಶದಾದ್ಯಂತ 395 ರೈಲು ನಿಲ್ದಾಣಗಳು, 50 ರೈಲುಗಳಲ್ಲಿ ಮಾತ್ರ ಸಿಸಿಟಿವಿ ಕ್ಯಾಮೆರಾ ವ್ಯವಸ್ಥೆ ಇದೆ. ಇನ್ನು ಮುಂದೆ ಪ್ರೀಮಿಯಂ, ಸಬರ್ಬನ್ ಸೇರಿದಂತೆ 11 ಸಾವಿರ ರೈಲುಗಳು ಹಾಗೂ 8,500 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ ಕಣ್ಗಾವಲು ವ್ಯವಸ್ಥೆ ಮಾಡಲಾಗುತ್ತದೆ. ಬೋಗಿಯ ದ್ವಾರ ಸೇರಿದಂತೆ, ಒಳಗೆ ಎಲ್ಲ ಕಡೆ ನಿಗಾ ಇಡುವ ರೀತಿಯಲ್ಲಿ ಒಂದೊಂದು ಕೋಚ್‌ನಲ್ಲಿ ಒಟ್ಟು 8 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಿದ್ದಾರೆ.

ಮುಂಬರುವ ಎರಡು ವರ್ಷಗಳಲ್ಲಿ ರಾಜಧಾನಿ, ಶತಾಬ್ದಿ, ದುರಂತೋ ಸೇರಿದಂತೆ ಎಲ್ಲಾ ಮೇಲ್/ಎಕ್ಸ್‌ಪ್ರೆಸ್, ಪ್ಯಾಸೆಂಜರ್ ರೈಲುಗಳಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ತರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ನಿಧಿ ಸಂಗ್ರಹಕ್ಕಾಗಿ ರೈಲ್ವೆ ಇಲಾಖೆ ವಿವಿಧ ಮಾರ್ಗಗಳನ್ನು ಹುಡುಕಲಿದೆ.

ಇನ್ನೊಂದು ಕಡೆ ಕಳೆದ ವರ್ಷ ಹಳಿ ತಪ್ಪಿದ ಘಟನೆಗಳು ಹೆಚ್ಚಾಗಿ ನಡೆದ ಹಿನ್ನೆಲೆಯಲ್ಲಿ ಈ ಬಾರಿ ಬಜೆಟ್‌ನಲ್ಲಿ ಹೆಚ್ಚಾಗಿ ರೈಲ್ವೆ ಸುರಕ್ಷತೆಗೆ ಪ್ರಾಮುಖ್ಯತೆ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಲಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ 4,943 ಮಾನವ ರಹಿತ ಲೆವೆಲ್ ಕ್ರಾಸಿಂಗ್ ತೊಲಗಿಸುವುದರ ಜತೆಗೆ, ಹಳೆ ಹಳಿಗಳ ಬದಲಾವಣೆ, ಹಳಿಗಳನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಬಜೆಟ್ ಮೀಸಲಾಗುತ್ತದೆ. 2020ರ ವೇಳೆಗೆ ಎಲ್ಲಾ ಮಾನವರಹಿತ ಲೆವೆಲ್ ಕ್ರಾಸಿಂಗ್‌ಗಳನ್ನು ತೊಲಗಿಸಲು ರೈಲ್ವೆ ಇಲಾಖೆ ಗುರಿ ಇರಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!