janadhvani

Kannada Online News Paper

ಸೌದಿ – ಭಾರತ ಸುಪ್ರೀಂ ಕೋ ಆರ್ಡಿನೇಷನ್ ಕೌನ್ಸಿಲ್ ರೂಪಿಸಲು ನಿರ್ಧಾರ

ರಿಯಾದ್: ಭಾರತದೊಂದಿಗಿನ ಸಹಭಾಗಿತ್ವವನ್ನು ಬಲಪಡಿಸುವ ಸಲುವಾಗಿ ಸೌದಿ-ಇಂಡಿಯಾ ಸುಪ್ರೀಂ ಕೋಆರ್ಡಿನೇಶನ್ ಕೌನ್ಸಿಲ್ ಅನ್ನು ರೂಪಿಸಲು ಸೌದಿ-ಕ್ಯಾಬಿನೆಟ್ ಸಭೆಯು ನಿರ್ಧರಿಸಿದೆ. ಈ ತಿಂಗಳ ಹತ್ತೊಂಬತ್ತಕ್ಕೆ ಭಾರತಕ್ಕೆ ಭೇಟಿ ನೀಡುವ ಮುಹಮ್ಮದ್ ಬಿನ್ ಸಲ್ಮಾನ್ ರಾಜಕುಮಾರರ ಉಪಸ್ಥಿತಿಯಲ್ಲಿ ಈ ಬಗ್ಗೆ ಸಹಿ ಹಾಕಲಾಗುವುದು.

ಭಾರತವು ಸೌದಿ ಅರೇಬಿಯಾದ ನಾಲ್ಕನೇ ಅತಿ ದೊಡ್ಡ ವ್ಯಾಪಾರಿ ಪಾಲುದಾರ ದೇಶವಾಗಿದೆ. ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಉದ್ಯಮ, ಆರ್ಥಿಕ, ಮಿಲಿಟರಿ ಮತ್ತು ಭದ್ರತೆ ವಲಯದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯವರ ಭೇಟಿ ವೇಳೆಯಲ್ಲಿ ಹಲವಾರು ಒಪ್ಪಂದಗಳಿಗೆ ಸಹಿ ಮಾಡಲಾಗಿದೆ.

ಸುಪ್ರೀಂ ಕೋಆರ್ಡಿನೇಷನ್ ಕೌನ್ಸಿಲ್‌ನ ರಚನೆಯು ಒಪ್ಪಂದಗಳ ಸಕ್ರಿಯ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಮತ್ತು ಉದ್ದೇಶಗಳನ್ನು ಪೂರೈಸಲು ಸಹಾಯ ಮಾಡಲಿದೆ. ಬ್ರಾಡ್ಕಾಸ್ಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಸೌದಿ ಬ್ರಾಡ್ಕಾಸ್ಟಿಂಗ್ ಅಥಾರಿಟಿಯು ಟೆಲಿವಿಷನ್ ಬ್ರಾಡ್ಕಾಸ್ಟಿಂಗ್ಗೆ ಸಹಕಾರ ಒದಗಿಸಲಿವೆ.

ವ್ಯಾಪಾರ, ಶಕ್ತಿ, ಹೂಡಿಕೆ ಮತ್ತು ಪ್ರವಾಸೋದ್ಯಮ ವಲಯಕ್ಕೆ ಸಂಬಂಧಿಸಿದಂತೆ ವಿವಿಧ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಈ ತಿಂಗಳು 19 ಮತ್ತು 20 ರಂದು ಸೌದಿ ರಾಜಕುಮಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮಂತ್ರಿಗಳು, ಹಿರಿಯ ಅಧಿಕಾರಿಗಳು ಮತ್ತು ಉದ್ಯಮಿಗಳು ಅವರನ್ನು ಅನುಗಮಿಸಲಿದ್ದು, ಮುಹಮ್ಮದ್ ಬಿನ್ ಸಲ್ಮಾನ್ ಪ್ರಥಮ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ

error: Content is protected !! Not allowed copy content from janadhvani.com