janadhvani

Kannada Online News Paper

ಬೆಂಗಳೂರು: ರಾಜ್ಯದಲ್ಲಿನ ಮರಳು ಕೊರತೆಯನ್ನು ನೀಗಿಸುವುದಕ್ಕಾಗಿ ಮಲೇಷ್ಯಾದಿಂದ ಆಮದು ಮಾಡಿಕೊಳ್ಳಲಾದ ನೈಸರ್ಗಿಕ ನದಿ ಮರಳಿನ ಮಾರಾಟ ಸರಕಾರಿ ಒಡೆತನದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ ಲಿಮಿಟೆಡ್‌ ಮೂಲಕ ಸೋಮವಾರದಿಂದ ಆರಂಭವಾಗಲಿದೆ.

50 ಕೆ.ಜಿ. ಚೀಲದಲ್ಲಿ ಬ್ರಾಂಡೆಡ್‌ ಮರಳಿನ ಮಾರಾಟ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಸೋಮವಾರ ಆರಂಭವಾಗಲಿದ್ದು, ಆನಂತರ ಉಳಿದೆಡೆ ಸಂಸ್ಥೆಯೇ ಸ್ಥಾಪಿಸಿರುವ ಯಾರ್ಡ್‌ಗಳಲ್ಲಿ ಮರಳು ಮಾರಾಟ ಶುರುವಾಗಲಿದೆ. ಬೆಂಗಳೂರು ನಗರದಲ್ಲಿ ಪ್ರತಿ ಟನ್‌ ಮರಳಿಗೆ 4 ಸಾವಿರ ರೂ. ನಿಗದಿಪಡಿಸಲಾಗಿದೆ.
ಬೆಂಗಳೂರಿನಲ್ಲಿ ಶನಿವಾರ ಎಂಎಸ್‌ಐಎಲ್‌ ಅಧ್ಯಕ್ಷ ಹಂಪನಗೌಡ ಬಾದರ್ಲಿ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಜಿ.ಸಿ.ಪ್ರಕಾಶ್‌ ಮರಳು ಮಾರಾಟಕ್ಕೆ ಅಧಿಕೃತ ಚಾಲನೆ ನೀಡಿದರು.
ಆನಂತರ ಮಾತನಾಡಿದ ಪ್ರಕಾಶ್‌ ”ದೇಶದಲ್ಲೇ ಪ್ರಥಮ ಬಾರಿಗೆ ಮರಳನ್ನು ಆಮದು ಮಾಡಿಕೊಂಡು ಚೀಲಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಕ್ಕಾಗಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರಲಾಗಿದೆ. ಕಳೆದ ಜೂನ್‌ ತಿಂಗಳಲ್ಲೇ ಜಾಗತಿಕ ಟೆಂಡರ್‌ ಕರೆಯಲಾಗಿತ್ತು. ಮಲೇಷ್ಯಾದಿಂದ ಆಮದು ಮಾಡಿಕೊಂಡ ಮರಳು ಆಂಧ್ರಪ್ರದೇಶದ ಕೃಷ್ಣಪಟ್ಟಂ ಬಂದರಿಗೆ ತಂದು ಅಲ್ಲಿ ಪ್ಯಾಕ್‌ ಮಾಡಿ ರೈಲ್ವೆ ರೇಕ್‌ಗಳ ಮೂಲಕ ಬೆಂಗಳೂರಿಗೆ ತರಲಾಗುತ್ತಿದೆ”ಎಂದರು.
”ಆಂಧ್ರಪ್ರದೇಶಕ್ಕೆ ಬರುವಾಗ ಪ್ರತಿ ಟನ್‌ ಮರಳಿಗೆ 2,300 ರೂ. ವ್ಯಯವಾಗುತ್ತದೆ. ಆನಂತರ ಅದನ್ನು ಪ್ಯಾಕ್‌ ಮಾಡಿ ರೈಲ್ವೆ ಮೂಲಕ ಸಾಗಿಸಲು 1100 ರೂ. ವೆಚ್ಚವಾಗುತ್ತದೆ. ಅದಕ್ಕೆ ಶೇ.5ರಷ್ಟು ಜಿಎಸ್‌ಟಿ ಹಾಗೂ ಇನ್ನಿತರ ತೆರಿಗೆಗಳ ಪಾವತಿ ಎಲ್ಲ ಸೇರಿ ಎಂಎಸ್‌ಐಎಲ್‌ಗೆ ಪ್ರತಿ ಟನ್‌ಗೆ 100ರಿಂದ 1500 ರೂ. ಲಾಭ ಇಟ್ಟುಕೊಂಡು ಪ್ರತಿ ಟನ್‌ಗೆ 4 ಸಾವಿರ ರೂ. ನಿಗದಿಪಡಿಸಲಾಗಿದೆ. ಇದು ಮಾರುಕಟ್ಟೆ ದರಕ್ಕಿಂತ ಕಡಿಮೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಮರಳಿಗೆ ಜಿಎಸ್‌ಟಿ ಪಾವತಿಸುತ್ತಿಲ್ಲ ಮತ್ತು ಅದೆಲ್ಲಾ ಅಕ್ರಮವಾಗಿ ತೆಗೆಯುತ್ತಿರುವ ಮರಳಾಗಿದೆ” ಎಂದು ಅವರು ಹೇಳಿದರು.
”ಸದ್ಯಕ್ಕೆ ಬಿಡದಿಯಲ್ಲಿರುವ ಯಾರ್ಡ್‌ನಲ್ಲಿ ಜ.22ರಿಂದ ಮರಳು ಮಾರಾಟ ಆರಂಭವಾಗಲಿದ್ದು, ನಂತರ ರೈಲಿನ ಮೂಲಕ ಮರಳು ಬಂದಂತೆ ಕ್ರಮೇಣ ಎಲ್ಲ ಕೇಂದ್ರಗಳಲ್ಲಿ ಮಾರಾಟ ಶುರುವಾಗಲಿದೆ. ರೈಲ್ವೆ ನಿಲ್ದಾಣದ ಬಳಿಯೇ ಯಾರ್ಡ್‌ಗಳನ್ನು ಮಾಡಲಾಗಿದೆ. ಸದ್ಯಕ್ಕೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು, ತುಮಕೂರು, ಕೋಲಾರ ಜಿಲ್ಲೆಗಳಲ್ಲಿನ ಮರಳು ಕೊರತೆ ನೀಗಿಸುವುದನ್ನು ಗುರಿಯಾಗಿಟ್ಟುಕೊಳ್ಳಲಾಗಿದೆ. ಆನಂತರ ಹುಬ್ಬಳ್ಳಿ ಸೇರಿದಂತೆ ರಾಜ್ಯದ ಎಲ್ಲೆಡೆ ಮರಳು ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು” ಎಂದು ಪ್ರಕಾಶ್‌ ವಿವರಿಸಿದರು.
”ಮರಳು ಮಾರಾಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮಲೇಷ್ಯಾದಲ್ಲಿ ಮರಳು ತುಂಬುವ ಮುನ್ನ, ಆನಂತರ ಅದು ಬಂದರಿನಲ್ಲಿ ಬಂದು ಪ್ಯಾಕ್‌ ಆಗುವಾಗ ಮತ್ತು ಬಳಿಕ ಯಾರ್ಡ್‌ನಲ್ಲಿ ಅದರ ಗುಣಮಟ್ಟವನ್ನು ಪರೀಕ್ಷಿಸಲಾಗುವುದು. ಮರಳಿಗೆ ಅಂತಾರಾಷ್ಟ್ರೀಯ ಮಾನದಂಡ ಐಎಸ್‌383 ನಿಗದಿಪಡಿಸಲಾಗಿದೆ. ಮರಳು ಅಮದು ಟೆಂಡರ್‌ ಅನ್ನು ದುಬೈ ಮತ್ತು ಮಲೇಷ್ಯಾದ ಕಂಪನಿಗಳು ಪಡೆದುಕೊಂಡಿವೆ” ಎಂದು ಅವರು ತಿಳಿಸಿದರು.
”ಗುಣಮಟ್ಟದ ಮರಳನ್ನು ಪೂರೈಸಬೇಕು ಎನ್ನುವ ಉದ್ದೇಶದಿಂದ ಮರಳನ್ನು ಚೀಲದಲ್ಲಿಯೇ ತುಂಬಲಾಗುತ್ತಿದೆ. ಮಾರುಕಟ್ಟೆಯಲ್ಲಿ ಯಾವುದೇ ದರ ನಿಗದಿ ಮಾಡಿಲ್ಲ. ನಮ್ಮದು ಪರಾರ‍ಯಯ ಉತ್ಪನ್ನ ಅಲ್ಲ, ಬೇರೆ ಉತ್ಪನ್ನಗಳಂತೆ ಇದೂ ಸಹ ಒಂದು ಉತ್ಪನ್ನ. ನಾವು ಆಮದು ಮಾಡಿಕೊಳ್ಳುತ್ತಿರುವ ಮಾದರಿಯನ್ನು ಅನುಸರಿಸಲು ಈಗಾಗಲೇ ತಮಿಳುನಾಡು, ಮಹಾರಾಷ್ಟ್ರ, ದೆಹಲಿ ತಂಡಗಳು ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿವೆ” ಎಂದು ಅವರು ಹೇಳಿದರು.
ಸದ್ಯಕ್ಕೆ ಕೆ.ಆರ್‌.ಪುರಂ ಸಮೀಪದ ಚನ್ನಸಂದ್ರ, ರಾಮನಗರ ಜಿಲ್ಲೆಯ ಬಿಡದಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ತುಮಕೂರು ಜಿಲ್ಲೆಯ ಕ್ಯಾತ್ಸಂದ್ರ, ಮಂಡ್ಯ, ಮೈಸೂರು ಮತ್ತು ಹುಬ್ಬಳ್ಳಿ ನಗರಗಳಲ್ಲಿ ಲಭ್ಯವಿದೆ.

ಮನೆ ಬಾಗಿಲಿಗೆ ಮರಳು: ಸಾರ್ವಜನಿಕರು ಎಂಎಸ್‌ಐಎಲ್‌ನ ಮರಳು ಮಾರಾಟ ಕೇಂದ್ರಗಳಿಗೆ ದೂರವಾಣಿ ಕರೆ ಮೂಲಕ ಬೇಡಿಕೆ ಸಲ್ಲಿಸಿದರೆ ಮನೆಯ ಬಾಗಿಲಿಗೆ ಮರಳನ್ನು ಪೂರೈಕೆ ಮಾಡಲಾಗುವುದು. ಆದರೆ ಅದಕ್ಕೆ ಸಾಗಣೆ ವೆಚ್ಚ ಹೆಚ್ಚುವರಿ. ಬಿಡದಿ ಕೇಂದ್ರದ ದೂರವಾಣಿ ಸಂಖ್ಯೆ 96069 30236 ನಿಂದ ಕೊನೆಯ ಸಂಖ್ಯೆ 40. ಹಾಗೆಯೇ ದೊಡ್ಡಬಳ್ಳಾಪುರ ಸಮೀಪದ ಶಿವಪುರ ಗ್ರಾಮದಲ್ಲಿನ ಕೇಂದ್ರದ ಸಂಖ್ಯೆ 96069 30231ನಿಂದ ಕೊನೆಯ ಸಂಖ್ಯೆ 35. ಇದಲ್ಲದೆ, ಎಂಎಸ್‌ಐಎಲ್‌ ವೆಬ್‌ಸೈಟ್‌ ಮೂಲಕ ಆನ್‌ಲೈನ್‌ನಲ್ಲೂ ಅಮದು ಮರಳನ್ನು ಬುಕ್‌ ಮಾಡಬಹುದು.

ಮರಳು ಆಮದು ಮಾಡಿ ವ್ಯಾಪಾರ ನಡೆಸಲು ಆವಕಾಶ

ಎಂಎಸ್‌ಐಎಲ್‌ ಅಲ್ಲದೆ, ಯಾವುದೇ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಮರಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬಹುದು ಎಂದು ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್‌ ಸ್ಪಷ್ಟಪಡಿಸಿದರು. ಈಗಾಗಲೇ ಆರು ಮಂದಿ ಸಾರ್ವಜನಿಕರು ಮರಳನ್ನು ಆಮದು ಮಾಡಿಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಹೆಸರು ನೋಂದಣಿ ಮಾಡಿದ್ದಾರೆ, ಅವರೂ ಸಹ ಅಮದು ಮಾಡಿಕೊಂಡು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಬಹುದು, ಅದಕ್ಕೆ ಯಾವುದೇ ನಿರ್ಬಂಧವಿಲ್ಲ ಎಂದರು.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!