ಖರ್ಚು-ವೆಚ್ಚಗಳಿಗೆ ಕಾಸಿಲ್ಲ: ಅಮೆರಿಕಾ ಸರ್ಕಾರ ಸ್ಥಗಿತ

ವಾಷ್ಟಿಂಗ್ಟನ್:  ಸರ್ಕಾರ ನಿರ್ವಹಣೆಗೆ ಬೇಕಾಗುವ ಖರ್ಚು-ವೆಚ್ಚಗಳ ಲೇಖಾನುದಾನಕ್ಕೆ ಕಾಂಗ್ರೆಸ್‌ನ ಅನುಮೋದನೆ ದೊರೆಯದ ಹಿನ್ನೆಲೆಯಲ್ಲಿ ಇಂದಿನಿಂದ ಅಮೆರಿಕ ಸರ್ಕಾರದ ಎಲ್ಲ ಕೆಲಸಕಾರ್ಯಗಳು ಸ್ಥಗಿತಗೊಂಡಿವೆ.ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ವಲಸೆ ನೀತಿಯ ಬಗ್ಗೆಯೂ ಸಾಕಷ್ಟು ಭಿನ್ನಾಭಿಪ್ರಾಯ ಉಂಟಾಗಿದೆ.

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತು ಡೆಮಾಕ್ರಟಿಕ್ ಸೆನೆಟರ್ ಚೆಕ್ ಶೂಮರ್ ಅವರ ನಡುವೆ ಕೊನೆಯ ಹಂತದಲ್ಲಿ ನಡೆದ ಮಾತುಕತೆ ವಿಫಲವಾಗಿದೆ. ಸರ್ಕಾರದ ಖರ್ಚುವೆಚ್ಚಗಳಿಗೆ ಅನುಮೋದನೆ ನೀಡುವಂತೆ ಟ್ರಂಪ್ ಅವರು ಮಾಡಿದ ಮನವಿಗೆ ಡೆಮಾಕ್ರಟಿಕ್ ಸಂಸದರು ಅನುಮೋದನೆ ನೀಡಲಿಲ್ಲ. ಇದರಿಂದ ಬಿಕ್ಕಟ್ಟು ಮುಂದುವರಿದಿದ್ದು, ಮುಂದಿನ ಕೆಲವು ವಾರಗಳವರೆಗೆ ಸರ್ಕಾರದ ನಿರ್ವಹಣೆಗೆ ಹಣ ಇಲ್ಲದಂತಾಗಿದೆ.

“ನಾವು ಸುದೀರ್ಘ ಮತ್ತು ವಿಸ್ತೃತ ಚರ್ಚೆ ನಡೆಸಿದ್ದೇವೆ. ಎಲ್ಲಾ ಹಳೆಯ ಬಾಕಿಗಳ ಬಗ್ಗೆಯೂ ಚರ್ಚಿಸಿದ್ದೇವೆ. ಆದರೂ ನಮ್ಮಲ್ಲಿ ಹಲವು ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಹಾಗೆಯೇ ಉಳಿದಿವೆ. ಆದರೂ ಸಮಾಲೋಚನೆ ಮುಂದುವರಿದಿದೆ” ಎಂದು ಶ್ವೇತಭವನದಲ್ಲಿ ಟ್ರಂಪ್ ಅವರೊಂದಿಗೆ ನಡೆದ ಸಭೆಯ ಬಳಿಕ ಸೆನೆಟ್ ಅಲ್ಪಸಂಖ್ಯಾತ ನಾಯಕ ಶೂಮರ್ ತಿಳಿಸಿದ್ದಾರೆ.ಈ ಹಿಂದೆಯೂ 2013 ರಲ್ಲಿ ಸರ್ಕಾರದ ಕೆಲಸ ಕಾರ್ಯಗಳು ಸ್ಥಗಿತಗೊಂಡಿತ್ತು. ಆಗ ಸುಮಾರು 15 ದಿನಗಳವರೆಗೆ ಇದು ಮುಂದುವರಿದಿತ್ತು.

“ಭಿನ್ನಾಭಿಪ್ರಾಯ ಶಮನಗೊಳಿಸಲು ಡೆಮಾಕ್ರಟಿಕ್ ಸೆನೆಟರ್‌ಗಳೊಂದಿಗೆ ಮಾತುಕತೆ ನಡೆಸುವಂತೆ ಸೆನೆಟ್‌ನ ಬಹುಸಂಖ್ಯಾತ ನಾಯಕ ಪೌಲ್ ರಯಾನ್  ಹಾಗೂ ಮಿಚ್ ಮ್ಯಾಕ್ಕೊನ್ನಲ್ ಅವರಿಗೆ ಟ್ರಂಪ್ ಅವರು ಸೂಚಿಸಿದ್ದಾರೆ” ಎಂದು ಸೆನೆಟರ್ ಜಾನ್ ಕಾರ್ನಿ ಸುದ್ದಿಗಾರರಿಗೆ ತಿಳಿಸಿದರು.

ಈ ವಾರಾಂತ್ಯವನ್ನು ಕಳೆಯಲು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಫ್ಲೋರಿಡಾಕ್ಕೆ ಹೋಗಲು ನಿರ್ಧರಿಸಿದ್ದರು. ಆದರೆ ದೇಶದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಈ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.ಡೆಮಾಕ್ರಟಿಕ್ ಪಕ್ಷದ ಕ್ರಮವನ್ನು ಖಂಡಿಸಿರುವ ಸೆನೆಟ್ ಬಹುಸಂಖ್ಯಾತ ನಾಯಕ ಮಿಚ್ ಮ್ಯಾಕ್ಕೊನ್ನೆಲ್ ಅವರು ಡೆಮಾಕ್ರಟಿಕ್‌ಗಳದ್ದು ಸಿನಿಕತನದ ನಿರ್ಧಾರ ಎಂದು ಟೀಕಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!