janadhvani

Kannada Online News Paper

ಎಸ್ಸೆಸ್ಸೆಫ್ ‘ಹಿಂದ್ ಸಫರ್’ ಫೆ.5ರಂದು ಪುತ್ತೂರಿಗೆ

ಬಂಟ್ವಾಳ: ಅಂತಾರಾಷ್ಟ್ರೀಯ ಮುಸ್ಲಿಂ ವಿದ್ವಾಂಸ ಸುಲ್ತಾನುಲ್ ಉಲಮಾ ಶೈಖ್ ಅಬೂಬಕರ್ ಅಹ್ಮದ್ ಎಪಿ ಉಸ್ತಾದ್ ಅವರ ನಿರ್ದೇಶನದಲ್ಲಿ ಅಖಿಲ ಭಾರತ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್(ಎಸ್ಸೆಸ್ಸೆಫ್) ವತಿಯಿಂದ ಕಾಶ್ಮೀರದಿಂದ ಪ್ರಾರಂಭಗೊಂಡು ಕೇರಳದಲ್ಲಿ ಸಮಾರೋಪಗೊಳ್ಳಲಿರುವ ‘ಹಿಂದ್ ಸಫರ್’ಭಾರತ ಯಾತ್ರೆಯು ಫೆ.5ರಂದು ಮಧ್ಯಾಹ್ನ 3.30ಕ್ಕೆ ಪುತ್ತೂರಿನ ದರ್ಬೆ ತಲುಪಲಿದೆ ಎಂದು ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಮುಹಮ್ಮದ್ ಅಲಿ ತುರ್ಕಳಿಕೆ ತಿಳಿಸಿದ್ದಾರೆ.

ಶನಿವಾರ ಬಿ.ಸಿ.ರೋಡ್‌ನಲ್ಲಿರುವ ಎಸ್ಸೆಸ್ಸೆಫ್ ಜಿಲ್ಲಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದರ್ಬೆಯಿಂದ ಎಸ್ಸೆಸ್ಸೆಫ್ ರೈಟೀಂ, ಎಸ್‌ವೈಎಸ್ ಇಸಾಬ, ಮುಅಲ್ಲಿಂ ಮಸೀರ ಸಹಿತ 3 ಸಾವಿರ ಕಾರ್ಯಕರ್ತರಿಂದ ಆಕರ್ಷಕ ಜಾಥಾವು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಕಿಲ್ಲೆ ಮೈದಾನದಲ್ಲಿ ಸಂಪನ್ನಗೊಳ್ಳಲಿದೆ ಎಂದು ಮಾಹಿತಿ ನೀಡಿದರು,

ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸೈಯದ್ ಮನ್ಸರ್ ತಂಙಳ್ ಜಾಥಾವನ್ನು ಉದ್ಘಾಟಿಸುವರು, ಖುರ್ರತುಸ್ಸಾದಾತ್ ಸೈಯದ್ ಕೂರತ್ ತಂಙಳ್ ಪ್ರಾರ್ಥನೆ ನೆರವೇರಿಸುವರು. ಝೈನುಲ್ ಉಲೆಮಾ ಮಾಣಿ ಉಸ್ತಾದ್ ಅಧ್ಯಕ್ಷತೆ ವಹಿಸುವರು.

ಎಸ್ಸೆಸ್ಸೆಫ್ ರಾಷ್ಟ್ರೀಯ ಅಧ್ಯಕ್ಷ ಶೌಕತ್ ನಈಮಿ ಕಶ್ಮೀರಿ, ಪ್ರಧಾನ ಕಾರ್ಯದರ್ಶಿ ಕೆ.ಎಂ.ಸಿದ್ದೀಖ್ ಮೋಂಟುಗೋಳಿ, ಅಖಿಲ ಭಾರತ ಎಸ್ಸೆಸ್ಸೆಫ್ ಉಪಾಧ್ಯಕ್ಷ ಡಾ. ಮುಹಮ್ಮದ್ ಫಾರೂಖ್ ನಹೀಮಿ ಕೊಲ್ಲಂ ಮುಖ್ಯ ಪ್ರಭಾಷಣ ಮಾಡುವರು ಎಂದು ಮಾಹಿತಿ ನೀಡಿದರು.

ಸಹಿಷ್ಣುತೆ ಮತ್ತು ಸಾಕ್ಷರತೆಯ ಭಾರತ ಎಂಬ ಘೋಷಣೆಯೊಂದಿಗೆ ಕಾಶ್ಮೀರದಿಂದ ಹೊರಟ ಹಿಂದ್ ಸರ್ ನೂರಕ್ಕೂ ಹೆಚ್ಚು ಕೇಂದ್ರಗಳ ಮೂಲಕ ಸಾಗಲಿದ್ದು, ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು, ಮೈಸೂರು, ಮಡಿಕೇರಿ ನಗರಗಳ ಮೂಲಕ ಬಂದು ಫೆ.5ರಂದು ದ.ಕ. ಜಿಲ್ಲೆಯ ಪುತ್ತೂರು ನಗರ ತಲುಪಲಿದೆ ಎಂದರು.

ಫೆ.7ರಂದು ಕೇರಳದ ಕಲ್ಲಿಕೋಟೆಯಲ್ಲಿ ಹಿಂದ್ ಸರ್ ಸಮಾರೋಪಗೊಳ್ಳಲಿದ್ದು, ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರ.ಕಾರ್ಯದರ್ಶಿ ಕಾಂತಪುರಂ ಎ.ಪಿ.ಉಸ್ತಾದ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್ ನಂದಾವರ, ಉಪಾಧ್ಯಕ್ಷ ಮಜೀದ್ ಹಾಫಿಳ್ ಗಾಣೆಮಾರ್, ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ವಗ್ಗ ಉಪಸ್ಥಿತರಿದ್ದರು.

error: Content is protected !! Not allowed copy content from janadhvani.com