ಕಾಂಕ್ರಿಟೀಕರಣ ಸಿದ್ಧತೆ ಪೂರ್ಣ: ಶಿರಾಡಿ ಘಾಟ್ ರಸ್ತೆ ಬಂದ್

ಉಪ್ಪಿನಂಗಡಿ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಕಳೆದ ಎರಡು ವರ್ಷಗಳಿಂದ (26 ತಿಂಗಳು) ನನೆಗುದಿಗೆ ಬಿದ್ದಿದ್ದು, ಇದೀಗ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಲಯ ಹಾಗೂ ಗುತ್ತಿಗೆದಾರರು ಸಿದ್ಧತೆಗಳನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಂಪುಹೊಳೆಯಿಂದ ಅಡ್ಡಹೊಳೆ ತನಕ 12.38 ಕಿ.ಮೀ ಕಾಂಕ್ರೀಟ್ ರಸ್ತೆ 2ನೇ ಹಂತದ ಕಾಮಗಾರಿಗೆ 2015ರಲ್ಲಿ 85.28 ಕೋಟಿ  ರೂಪಾಯಿ ಮಂಜೂರು ಆಗಿತ್ತು, ಇದರಲ್ಲಿ 12.38 ಕಿ.ಮೀ. ಕಾಂಕ್ರಿಟೀಕರಣಕ್ಕೆ 63.10 ಕೋಟಿ ‌, ಉಳಿದಂತೆ 21 ಕಿ.ಮಿ. ಡಾಂಬರೀಕರಣಕ್ಕೆ 22.18 ಕೋಟಿ ವಿಂಗಡಿಸಲಾಗಿದೆ. ಕಾಂಕ್ರೀಟ್ ರಸ್ತೆ 8.5 ಮೀಟರ್, ಡಾಂಬರೀಕರಣ 7 ಮೀಟರ್ ಅಗಲ ಆಗಲಿದೆ. ‘ಓಷಿಯನ್ ಕನ್‍ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಕಾಮಗಾರಿ ನಿರ್ವಹಿಸಲಿದೆ.

 ಶಿರಾಡಿ ಘಾಟ್ ರಸ್ತೆ ಬಂದ್:ಬೆಂಗಳೂರು-ಮಂಗಳೂರು ನಡುವಿನ ಪ್ರಯಾಣಕ್ಕೆ ಈ ರಸ್ತೆ ಅತೀ ಹೆಚ್ಚು ಬಳಕೆ ಆಗುತ್ತಿದೆ. ಇಲಾಖೆಯ ಕೋರಿಕೆಯಂತೆ ಇದೇ 20ರಿಂದ ಶಿರಾಡಿ ಘಾಟ್ ರಸ್ತೆ ಬಂದ್ ಆಗಲಿದೆ. ವಾಹನಗಳ ಸಂಚಾರಕ್ಕೆ ಬದಲಿ ರಸ್ತೆ  ಬಳಸುವಂತೆ ಆದೇಶಿಸಲಾಗಿದೆ.

ಕಾಂಕ್ರೀಟ್ ಹಾಕುವ ಕಾಮಗಾರಿ ಸಂದರ್ಭದಲ್ಲಿ ಅದರ ಪಕ್ಕದಲ್ಲಿ ವಾಹನಗಳು ಹಾದು ಹೋದರೆ ರಸ್ತೆಯ ಗುಣಮಟ್ಟ ಕುಸಿಯುತ್ತದೆ. ಆದ ಕಾರಣ ರಸ್ತೆಯನ್ನು ಸಂಪೂರ್ಣ ಬಂದ್ ಮಾಡುವ ಬಗ್ಗೆ ಇಲಾಖೆ ನಿರ್ಧರಿಸಿದೆ.

ಜರ್ಮನಿಯಿಂದ ಹೊಸ ಯಂತ್ರ: ಮೊದಲ ಹಂತದ ಕಾಮಗಾರಿ ನಡೆಸಿದಾಗ ಜರ್ಮಿನಿಯಿಂದ 7.5 ಕೋಟಿ ಮೌಲ್ಯದ ಅತ್ಯಾಧುನಿಕ ಯಂತ್ರವನ್ನು ತರಿಸಿಕೊಳ್ಳಲಾಗಿತ್ತು. ಇದೀಗ ಈ ಕಾಮಗಾರಿ ಸಲುವಾಗಿ ಜರ್ಮನಿಯಿಂದ 10 ಕೋಟಿ ರೂ.  ಮೌಲ್ಯದ ಯಂತ್ರವನ್ನು ತರಿಸಿಕೊಳ್ಳಲಾಗಿದೆ. ಕಾಮಗಾರಿಯ ಕಚ್ಚಾ ಸಾಮಗ್ರಿಗಳಾದ ಜಲ್ಲಿ, ಮರಳು ಮೊದಲಾದವುಗಳು ಶೇಕಡಾ 50ರಷ್ಟು ಶೇಖರಣೆ ಮಾಡಿಕೊಳ್ಳಲಾಗಿದೆ’ ಎಂದು ಓಷಿಯನ್ ಕನ್‍ಸ್ಟ್ರಕ್ಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಆಡಳಿತ ನಿರ್ದೇಶಕ ಇನಾಯತ್ ಆಲಿ  ತಿಳಿಸಿದ್ದಾರೆ.

‘ವಿರ್ಟ್‍ಜನ್ ಕಂಪೆನಿಯು ಟಿಸಿಎಂ-180 ಸೆನ್ಸರ್ ಪೇವರ್ ಯಂತ್ರವನ್ನು ಖರೀದಿ ಮಾಡಿದ್ದು, ಈ ಯಂತ್ರದಲ್ಲಿ ಸೆಂಟ್ರಿಂಗ್ ಇಲ್ಲದೆ ಕಾಮಗಾರಿ ನಡೆಸಬಹುದು. ಹಿಂದಿನ ಬಾರಿ ತರಿಸಿದ್ದಕ್ಕಿಂತಲೂ ಅತ್ಯಾಧುನಿಕ ಯಂತ್ರ ಇದಾಗಿರುತ್ತದೆ. ಅತಿ ವೇಗದಲ್ಲಿ ಕಾಮಗಾರಿ ನಡೆಸಲು ಅವಕಾಶ ಇದೆ’ ಎಂದು ಅವರು ತಿಳಿಸಿದ್ದಾರೆ. ಯಂತ್ರವನ್ನು ಶಿರಾಡಿ ಬಳಿ ಅಡ್ಡಹೊಳೆ ಪ್ಲಾಂಟ್‍ನಲ್ಲಿ ಸ್ಥಾಪಿಸಲಾಗಿದೆ.

ಮೊದಲ ಹಂತದ್ದು ಗುಣಮಟ್ಟದ ಕೆಲಸ: ಮೊದಲ ಹಂತದ ಕಾಮಗಾರಿ ಹೆಗ್ಗದ್ದೆಯಿಂದ ಕೆಂಪುಹೊಳೆ ತನಕ 11.77 ಕಿ.ಮೀ. ಕಾಂಕ್ರಿಟೀಕರಣ 69.90 ಕೋಟಿ ವೆಚ್ಚವಾಗಿದ್ದು, ಇದನ್ನು ಇದೇ ಓಷಿಯನ್ ಕನ್‍ಸ್ಟ್ರಕ್ಷನ್ ಸಂಸ್ಥೆ ನಿರ್ವಹಿಸಿತ್ತು. 2015 ಆಗಸ್ಟ್ 9ರಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಕೇಂದ್ರ ಭೂಸಾರಿಗೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆದಿತ್ತು. ಕಾಮಗಾರಿ ಗುಣಮಟ್ಟದ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರು ಮತ್ತು ಹೆದ್ದಾರಿ ಇಲಾಖೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು.

Leave a Reply

Your email address will not be published. Required fields are marked *

error: Content is protected !!