ಗಡಿಯಲ್ಲಿ ಗುಂಡಿನ ಕಾಳಗ: ನೂರಾರು ನಾಗರಿಕರ ಸ್ಥಳಾಂತರ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಪಾಕಿಸ್ತಾನದ ಕದನವಿರಾಮ ಉಲ್ಲಂಘನೆ ಇಂದು ಕೂಡ ಮುಂದುವರಿದಿದೆ. ಜಮ್ಮು ಮತ್ತು ಸಾಂಬಾ ಜಿಲ್ಲೆಗಳಲ್ಲಿ ಅಂತಾರಾಷ್ಟ್ರೀಯ ಗಡಿ ಬಳಿ ಸೇನಾ ಠಾಣೆಗಳು ಮತ್ತು ನಾಗರಿಕರ ಪ್ರದೇಶಗಳನ್ನು ಗುರಿಯಾಗಿಟ್ಟುಕೊಂಡು ಪಾಕ್ ಸೈನಿಕರು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಭಾರತದ ಕಡೆ ಗಡಿ ಭದ್ರತಾ ಪಡೆಯ ಕಾನ್‌ಸ್ಟೇಬಲ್ ಜಗ್‌ಪಾಲ್‌ ಸಿಂಗ್‌ ಎಂಬುವವರು ಮತ್ತು ಮೂವರು ನಾಗರಿಕರು ಸೇರಿ ನಾಲ್ವರು ಮೃತಪಟ್ಟಿದ್ದಾರೆ, ಕೆಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನದ ಯುದ್ಧ ವಿರಾಮ ಉಲ್ಲಂಘನೆಗೆ ಭಾರತೀಯ ಯೋಧರು ದಿಟ್ಟ ಪ್ರತ್ಯುತ್ತರ ನೀಡಿದ್ದು, ಗುಂಡಿನ ಕಾಳಗ ಮುಂದುವರಿದಿದೆ.

ಮೃತ ನಾಗರಿಕರನ್ನು ಸುಚೇತ್‌ಗಡದ ಕಮಲ್‌ಜೀತ್ (40), ಬಾಲಕೃಷ್ಣ (30) ಮತ್ತು ದೇವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ.ಆರ್.ಎಸ್. ಪುರದಿಂದ ಬಸಂತೇರ್ ನದಿವರೆಗಿನ ಪ್ರದೇಶದಲ್ಲಿ ಬೆಳಿಗ್ಗೆ 6.40 ರಿಂದ 6.45 ವರೆಗೆ ಭಾರೀ ಗುಂಡಿನ ಕಾಳಗ ನಡೆದಿದೆ. ಬಳಿಕವೂ ಆಗಾಗ ದಾಳಿ ನಡೆಸುತ್ತಿದ್ದ ಪಾಕಿಸ್ತಾನದ ಸೈನಿಕರಿಗೆ ತಕ್ಕ ಮಾರುತ್ತರ ನೀಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಗಡಿಯಲ್ಲಿ ಪರಿಸ್ಥಿತಿ ತುಂಬ ಉದ್ವಿಗ್ನವಾಗಿದೆ. ಹೀಗಾಗಿ ಆಗಡಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಪಾಕಿಸ್ತಾನದ ಭಾರೀ ದಾಳಿ ಹಿನ್ನೆಲೆಯಲ್ಲಿ ಗಡಿಭಾಗದ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!