janadhvani

Kannada Online News Paper

ಕೊರೋನಾ: ನಿರ್ದಿಷ್ಟ ಸಮುದಾಯ ವಿರುದ್ಧ ಆರೋಪ – ಕೇಂದ್ರ ಸರಕಾರ ಆಕ್ಷೇಪ

ನವದೆಹಲಿ,ಏ.09:ಮಾರಕ ಕೊರೋನಾ ವೈರಸ್ ವಿಶ್ವಾದ್ಯಂತ ಜನರ ನಿದ್ದೆಗೆಡಿಸಿದ್ದು, ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಅದನ್ನು ಎದುರಿಸಲು ಹರಸಾಹಸ ಪಡುತ್ತಿದೆ. ಭಾರತದಲ್ಲೂ ವೈರಸ್ ಸೋಂಕಿತರ ಸಂಖ್ಯೆ ದೈನಂದಿನ ಏರಿಕೆಯಾಗುತ್ತಿದ್ದು, ಬಲಿಯಾದವರ ಸಂಖ್ಯೆ 166 ಕ್ಕೆ ಏರಿದೆ.

ವಿಪರ್ಯಾಸವೆಂದರೆ ವಿಶ್ವದ ಎಲ್ಲಾಕಡೆ ಜಾತಿ, ಧರ್ಮ ಬೇಧವಿಲ್ಲದೆ ಈ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದರೆ,ಭಾರತದಲ್ಲಿ ಮಾತ್ರ ಅದನ್ನು ಒಂದು ನಿರ್ದಿಷ್ಟ ಸಮುದಾಯ ಮೇಲೆ ಎತ್ತಿಕಟ್ಟಲು ಕೆಲವು ಸಮಾಜ ದ್ರೋಹಿಗಳು ಶ್ರಮಿಸುತ್ತಿದ್ದಾರೆ. ಸಾಮಾಜಿಕ ತಾಣದಲ್ಲೂ, ದೃಶ್ಯ ಮಾಧ್ಯಮಗಳಲ್ಲೂ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ ತೇಜೋವಧೆ ನಡೆಸುತ್ತಿದ್ದಾರೆ.

ಇದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರಕಾರ ,ಕೋವಿಡ್ ವೈರಸ್‌ ಸೋಂಕಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಧರ್ಮ, ಸಮುದಾಯ ಅಥವಾ ಪ್ರದೇಶದ ಮೇಲೆ ಕಳಂಕ ಹೊರಿಸುವುದು ಇಲ್ಲವೇ ಇವರೇ ಸೋಂಕು ಹರಡುತ್ತಿದ್ದಾರೆ ಎಂದು ಹಣೆಪಟ್ಟಿ ಕಟ್ಟದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಹೊಸದಿಲ್ಲಿಯ ನಿಝಾಮುದ್ದೀನ್‌ನಲ್ಲಿರುವ ತಬ್ಲೀಗ್ ಜಮಾತ್‌ ಸಮಾವೇಶದ ಬಳಿಕ, ಸೋಂಕು ವ್ಯಾಪಕವಾಗಿ ಹರಡಲು ಮುಸ್ಲಿಂ ಸಮುದಾಯವೇ ಕಾರಣ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ, ಅದರಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹೆಚ್ಚಾಗಿ ಹರಿದಾಡಿದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ರೀತಿ ಮನವಿ ಮಾಡಿದೆ.

ಸಾಂಕ್ರಾಮಿಕ ಸೋಂಕುಗಳು ದೇಶವನ್ನು ಬಾಧಿಸುತ್ತಿರುವ ಸಂದರ್ಭದಲ್ಲಿ ಈ ರೀತಿ ನಿರ್ದಿಷ್ಟ ಗುಂಪು ಅಥವಾ ಸಮುದಾಯದ ಮೇಲೆ ಕಳಕ ಹೊರಿಸುವುದರಿಂದ ಸಮುದಾಯಗಳ ನಡುವೆ ಪರಸ್ಪರ ದ್ವೇಷ, ಅಸೂಯೆ ಬೆಳೆದು, ಸಾಮಾಜಿಕ ಸ್ವಾಸ್ಥ್ಯ ಹಾಳಾಗಿ, ಅಶಾಂತಿ ಮತ್ತು ಆತಂಕ ಸೃಷ್ಟಿಯಾಗುತ್ತದೆ ಎಂದು ಸರಕಾರ ಅಭಿಪ್ರಾಯಪಟ್ಟಿದೆ.

ಹಾಗೇ ಈ ಸಂದರ್ಭದಲ್ಲಿ ಆರೋಗ್ಯ ಸೇವಾ ಸಿಬ್ಬಂದಿ, ಸ್ವಚ್ಛತಾ ಕೆಲಸಗಾರರು ಮತ್ತು ಪೊಲೀಸರು ಸೋಂಕು ಹರಡದಂತೆ ಹಗಲಿರುಳು ಶ್ರಮಿಸುತ್ತಿದ್ದು, ಅವರ ಜತೆ ಅನುಚಿತವಾಗಿ ವರ್ತಿಸದಂತೆಯೂ ಸರಕಾರ ಜನರಲ್ಲಿ ವಿನಂತಿ ಮಾಡಿಕೊಂಡಿದೆ.

error: Content is protected !! Not allowed copy content from janadhvani.com